Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಸುಂದರ ಪ್ರಕೃತಿಯ ಮಡಿಲಿನಲ್ಲಿ ಶ್ರೀ ಕ್ಷೇತ್ರ ಕಾರಿಂಜ

Share This:

ಶ್ರೀ ಕ್ಷೇತ್ರ ಕಾರಿಂಜ

ದಕ್ಷಿಣ ಕನ್ನಡ ಜಿಲ್ಲೆಯ ಕಾವಳ ಮೂಡೂರು ಗ್ರಾಮದಲ್ಲಿ ಸಮುದ್ರ ಮಟ್ಟದಿಂದ ಸುಮಾರು ಒಂದು ಸಾವಿರ ಅಡಿಗೂ ಮಿಕ್ಕಿ ಎತ್ತರದಲ್ಲಿರುವುದೇ ಶಿವ ಪಾರ್ವತಿಯರ ಮಿಲನದ ಆಕರ್ಷಣೀಯ ಆರಾಧನಾ ತಾಣವೇ ಕಾರಿಂಜ. ಬಿ.ಸಿ. ರೋಡಿನಿಂದ 15 ಕಿ.ಮೀ ದೂರ ಇರುವ ಈ ಕ್ಷೇತ್ರಕ್ಕೆ ಬಂಟ್ವಾಳ-ಧರ್ಮಸ್ಥಳ ರಾಜ್ಯ ಹೆದ್ದಾರಿಯಲ್ಲಿ ಮುಂದೆ ಸಾಗಿದಾಗ ವಗ್ಗದಲ್ಲಿ ದೇಗುಲದ ಮಹಾದ್ವಾರ ಕೈಬೀಸಿ ಸ್ವಾಗತಿಸುತ್ತದೆ. ಇಲ್ಲಿಂದ ಕೇವಲ 2.4 ಕಿ.ಮೀ ಅಂತರ ಕಾನನದ ನಡುವೆ ತಂಗಾಳೀಗೆ ಮೈಯೊಡ್ಡಿ ಸಾಗಿದರೆ ಮೇಲೆ ಕಾಣುವುದೇ ಕಾರಿಂಜ ಬೆಟ್ಟ. ಬಿ.ಸಿ.ರೋಡಿನಿಂದ, ಇಲ್ಲವೇ ವಗ್ಗದಿಂದ ಸರಕಾರಿ ಬಸ್ಸು ಹಾಗು ವಗ್ಗದಿಂದ ಇತರ ವಾಹನಗಳೂ ಭಕ್ತರ ಅನುಕೂಲಕ್ಕೆ ಇಲ್ಲಿದೆ. ಮಾತೃ ಶಕ್ತಿಯ ಪ್ರತೀಕವಾಗಿ ಪಾರ್ವತಿ ದೇವಿ ಮತ್ತು ಪಿತೃ ಶಕ್ತಿಯ ಸಂಕೇತವಾಗಿ ಪರಮೇಶ್ವರ ಧರೆಗೆ ಇಳಿದ ಕ್ಷೇತ್ರವೆಂದೇ ಪ್ರಸಿದ್ದಿ ಪಡೆದಿರುವ ಇಲ್ಲಿ ಪರಮೇಶ್ವರ ಬೆಟ್ಟದ ತುದಿಯಲ್ಲಿದ್ದರೆ, ಪಾರ್ವತಿ ದೇವಿ ಬೆಟ್ಟದ  ಮಧ್ಯಭಾಗದಲ್ಲಿ (ಪರಮೇಶ್ವರನ ಗರ್ಭಗುಡಿಗಿಂತ ಸುಮಾರು ನೂರೈವತ್ತು ಅಡಿಗಳಷ್ಟು ಕೆಳಗೆ) ನೆಲೆಯಾಗಿದ್ದಾಳೆ.

ಇತಿಹಾಸ

ಎಂಟುನೂರು ವರ್ಷಗಳ ಹಿಂದೆ  ಕಾರಿಂಜತ್ತಾಯ ಮತ್ತು ಇಚ್ಳತ್ತಾಯ ಎಂಬ ಇಬ್ಬರು ಬ್ರಾಹ್ಮಣ ಸಹೋದರರು ಉತ್ತರ ಕನ್ನಡ ದ ಕುಂಬಲದಿಂದ ಸನಾತನ ಸಂಸ್ಕೃತಿಯ ಪ್ರಚಾರಕಾಗಿ ಬಂದಿದ್ದರು. ಆ ಸಮಯದಲ್ಲಿ ತುಳುನಾಡಲ್ಲಿ ರಾಜ ಆಡಳಿತ ಅಸ್ಥಿತ್ವದಲ್ಲಿ ಇತ್ತು. ಭೂತಾರಾಧನೆ ಇಲ್ಲಿನ ಜನರ ಮುಖ್ಯ ಆಚರಣೆ ಆಗಿತ್ತು. ಯಾವ ಜಾಗದಲ್ಲಿ ಇಚ್ಳತ್ತಾಯ ನೆಲೆಯಾದನು ಆ ಪ್ರದೇಶ ಇಚ್ಲಂಪಾಡಿ ಎಂದು ಪ್ರಸಿದ್ಧಿಯಾಯಿತು ಹಾಗೂ ಎಲ್ಲಿ ಕಾರಿಂಜತ್ತಾಯ ನೆಲೆಯಾದನು ಆ ಜಾಗ ಕಾರಿಂಜ ಎಂದು ಪ್ರಸಿದ್ದಿಯಾಯಿತು. ಕಾರಿಂಜ ಮತ್ತು ಇಚ್ಲಂಪಾಡಿ ನಡುವೆ ಸುಂದರ ಪ್ರಕೃತಿ ದ್ರಶ್ಯ ಅಲ್ಲಿ ಒಂದು ಸುಂದರವಾದ ಶಿವ ದೇವಸ್ಥಾನ ನಿರ್ಮಾಣವಾಯಿತು. ಈ ಕ್ಷೇತ್ರ ಕಾರಿಂಜೇಶ್ವರ ಎಂದು ಪ್ರಸಿದ್ಧಿಯಾಯಿತು.

ಕ್ಷೇತ್ರದ ವೈಶಿಷ್ಟತೆಗಳು

ಕಾರಿಂಜೇಶ್ವರ ದೇವಸ್ಥಾನ ಹಲವಾರು ವಿಸ್ಮ ಯಗಳ ತಾಣವಾಗಿದೆ. ಇಲ್ಲಿನ ಗಧಾತೀರ್ಥದಲ್ಲಿ ಕಡು ಬೇಸಿಗೆಯಲ್ಲಿ ಸಿಹಿ ನೀರಿನ ನಿಧಿಯೇ ಇದೆ. ಪರಮೇಶ್ವರನ ಸನ್ನಿಧಿಯ ಕೆಳಗೆ ಉಂಗುಷ್ಟ ಮತ್ತು ಮೊಣಕಾಲು ಉಂಗುಷ್ಟ ಮತ್ತು ಮೊಣಕಾಲು ತೀರ್ಥದಲ್ಲಿ ಬಿರುಬಿಸಿಲಿನ ಕಾಲದಲ್ಲೂ ನೀರ ಒರತೆ ಕಲ್ಲಿನಲ್ಲಿ ಒಸರುತ್ತದೆ. ಪಾರ್ವತಿ ಸನ್ನಿಧಿಗಿಂತ ಕೆಳಗಡೆ ಏಕರೇಖಾ ಗಣಪತಿ ಚಿತ್ರವನ್ನು ಕಲ್ಲಿನಲ್ಲಿ ಕೊರೆಯಲಾಗಿದೆ.

ಬೆಟ್ಟದಿಂದ ಕೆಳಗಡೆ ಇರುವ ಕೊಳವನ್ನು “ಗಧಾ ತೀರ್ಥ” ಎಂದು ಕರೆಯಲಾಗುತ್ತದೆ. ಪುರೋಹಿತರು ಹೇಳುವ ಪ್ರಕಾರ ಭೀಮನು ತನ್ನ ಕಾಲುಗಳನ್ನು ಬಗ್ಗಿಸಿ ತನ್ನ ಗಧಾದಿಂದ ಹೊಡೆದಾಗ ಗಧಾ ತೀರ್ಥವೂ ಉಕ್ಕಿತು ಎಂಬ ಪ್ರತೀತಿಯಿದೆ. ಹಾಗೆಯೇ ಇನ್ನು ೩ ತೀರ್ಥ ಕೊಳಗಳಿವೆ ಆವುಗಳು ಯಾವುದೆಂದರೆ ಹಂದಿ ತೀರ್ಥ , ಉಂಗುಷ್ಟ ತೀರ್ಥ ಮತ್ತು ಜಾನು ತೀರ್ಥ. ಈ ತೀರ್ಥ ಕೊಳಗಳಲ್ಲಿ ಸ್ನಾನ ಮಾಡಿದರೆ ರೋಗಗಳು ಕಡಿಮೆಯಾಗುತ್ತದೆ ಎಂಬ ನಂಬಿಕೆಯಿದೆ. ಪ್ರತಿವರ್ಷದ ಆಟಿ(ಭೀಮನ) ಅಮವಾಸ್ಯೆಯಂದು ಭಕ್ತರು ಇಲ್ಲಿಗೆ ಆಗಮಿಸಿ ತೀರ್ಥಸ್ನಾನ ಮಾಡಿ ದೇವರಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಇಲ್ಲಿ ಅಟಿ ಅಮಾವಸ್ಯೆಯ ದಿನ ತೀರ್ಥಸ್ನಾನ ಮಾಡುದರಿಂದ ಮೈಮೇಲಿನ ಕೇಡು ಹಾಗೂ ಚರ್ಮ ರೋಗಗಳು ನಿವಾರಣೆಯಾಗುತ್ತದೆ ಹಾಗೆಯೇ ನವದಂಪತಿಗಳಿಗೆ ಸಂತಾನ ಪ್ರಾಪ್ತಿಯಾಗುತ್ತದೆ.

ಪ್ರಕೃತಿಮಾತೆಯನ್ನು ಪೂಜಿಸುವ ಉದ್ದೇಶದಿಂದ ದೇಗುಲದ ಕೆಳಭಾಗದ ರಥಬೀದಿಯಲ್ಲಿ ಪೂರ್ವದಿಂದ ಪಶ್ಚಿಮಕ್ಕೆ ಗಧಾತೀರ್ಥ ದಡಕ್ಕೆ ಹಲವು ಕಟ್ಟೆಗಳಿದ್ದು ಇವುಗಳಿಗೆ ಜಾತ್ರೆ ಸಮಯದಲ್ಲಿ ಪೂಜೆ ಮಾಡಲಾಗುತ್ತದೆ. ಶಿವ ದೇವಾಲಯದಿಂದ ೧೪೩ ಮೆಟ್ಟಿಲುಗಳನ್ನೇರಿ ಹೋದರೆ ಅಲ್ಲಿ ಸುಂದರವಾದ ಪಾರ್ವತಿ ದೇವಿ ಹಾಗು ಗಣಪತಿ ದೇವರ ಗುಡಿ ಇದೆ ಹಾಗೆಯೇ  ಮುಂದೆ ಸಾಗಿದರೆ ಅಲ್ಲಿ ಪರಿವಾರ ದೈವಗಳಾದ ಪಿಳಿಚಾಮುಂಡಿ ಮತ್ತು ಕೊಡಮಣಿತ್ತಾಯ ದೈವಗಳ ಗುಡಿಯಿದೆ. ಮುಂದೆ ಅಷ್ಟೇ ಮೆಟ್ಟಿಲುಗಳನ್ನು ಏರಿ ಹೋದರೆ ಅಲ್ಲಿ ಶಿವನ ಶಿಲಾಮಯ ದೇವಾಲಯವಿದೆ. ಸುಮಾರು ಹದಿನೈದು ಮಂದಿ ನಿಲ್ಲಬಹುದಾದ ಉಗ್ರಾಣಿ ಗುಹೆ, ಅಲ್ಲಿಂದ ಸ್ವಲ್ಪ ಮೇಲಕ್ಕೆ ಉಕ್ಕುಡದ ಬಾಗಿಲು ಪ್ರಕೃತಿ ಮಾನವನಿಗೆ ನೀಡಿದ ವಿಶಿಷ್ಟಗಳೆನ್ನಬಹುದು. ಪ್ರತಿಧ್ವನಿ ನೀಡುವ “ನಿನ್ನಿಕಲ್ಲು”, ಸೀತಾಮಾತೆ  ಪ್ರಮಾಣ ಮಾಡಿದ್ದರೆನ್ನಲಾಗುವ “ಸತ್ಯದಕಲ್ಲು” ಹಾಗೂ ವಾನರಗಳಿಗೆ ನೈವೇದ್ಯೆ ಇಡುವ ಕಲ್ಲು . ಇವು ಎಲ್ಲವೂ  ಅನಾದಿಕಾಲದಿಂದಲೂ ಸತ್ಯಕ್ಕೆ ಎಷ್ಟು ಮಹತ್ವ ನೀಡಲಾಗುತ್ತಿತು ಎಂಬುದರ ಪ್ರತೀಕವಾಗಿದೆ.

ಇಲ್ಲಿನ ಇನ್ನೊಂದು ಮುಖ್ಯ ಆಕರ್ಷಣೆ ವಾನರಗಳು. ಇಲ್ಲಿ ವಾನರಗಳನ್ನು ಹನುಮಂತ ದೇವರ ವಂಶಸ್ಥರು ಎಂದು ಪೂಜಿಸಲಾಗುತ್ತದೆ. ಶ್ರೀರಾಮ ಸೀತಾನ್ವೇಷಣೆ ಬಳಿಕ ಹಿಂತಿರುಗುವಾಗ ತನ್ನಲ್ಲಿ ಸೇವೆಸಲ್ಲಿಸಿದ ಅಪಾರ ಕಪಿಸೈನ್ಯದಲ್ಲಿ ಒಂದು ಅಂಶವನ್ನು ಇಲ್ಲಿ ಬಿಟ್ಟು ಅದಕ್ಕೆ ಕ್ಲೇತ್ರದಿಂದ ದೇವರ ನೈವೇದ್ಯ ನೀಡುವ ವ್ಯವಸ್ಥೆ ಮಾಡಿದ್ದು ಈಗಲೂ ಅದೇ ಸಂಪ್ರದಾಯ ಮಂದುವರಿದಿದೆ. ದೇವರ ಪೂಜೆಯ ಬಳಿಕ ಬಿಸಿಯಾದ ನೈವೇದ್ಯವನ್ನು ಇಲ್ಲಿರುವ ದೊಡ್ಡ ಕಲ್ಲಿನಲ್ಲಿ ಹಾಕಲಾಗುತ್ತದೆ. ಇದನ್ನು ಮೊದಲಿಗೆ ಒಂದು ದೊಡ್ಡ ಕೋತಿ ಬಂದು ತಿನ್ನುತ್ತದೆ . ಆ ಕೋತಿಯನ್ನು “ಕಾರಿಂಜದ ದಡ್ಡ” ಎಂದು ಕರೆಯಲಾಗುತ್ತದೆ.ನಂತರ ಎಲ್ಲಾ ಕೋತಿಗಳು ಬಂದು ತಿನ್ನುತ್ತದೆ.ಹಿಂದೊಮ್ಮೆ ಇಲ್ಲಿ ಕಾರಿಂಜದ ದಡ್ಡ ಎಂಬ ಭಾರಿ ಗಾತ್ರದ ಒಂದು ಕೋತಿ ಇತ್ತು ಎಂದು ಹೇಳಲಾಗುತ್ತದೆ. ನೈವೇದ್ಯವನ್ನು ಪ್ರಥಮವಾಗಿ ಅದು ತಿನ್ನುತ್ತಿತ್ತಂತೆ, ಎಲ್ಲಿಯಾದರೂ ಮರಿ ಕಪಿಗಳು ಹತ್ತಿರ ಬಂದರೆ ಬಿಸಿ ನೈವೇದ್ಯದಲ್ಲಿ ಅದರ ಮುಸುಡನ್ನು ತಿಕ್ಕಿ ದೂರ ತಳ್ಳುತ್ತಿತ್ತು ಎಂದು ಹಿರಿಯರು ಈಗಲೂ ಹೇಳುತ್ತಾರೆ.  ದೇವರಿಗೆ ಪೂಜೆಯಾದ ಬಳಿಕ ಇಲ್ಲಿ ವಾಸ್ತವ್ಯ ಇರುವ ವಾನರಿಗೆ ಮೂರು ಸೇರು ಅಕ್ಕಿಯ ನೈವೇದ್ಯವನ್ನು ದೊಡ್ಡದಾದ ಬಂಡೆಕಲ್ಲಿನ ಮೇಲೆ ಹಾಕಲಾಗುತ್ತದೆ. ಪೂಜೆಯಾಗುವ ಹೊತ್ತಿಗೆ ಅವುಗಳ ಗುಂಪು ಬಂದು ನೈವೇದ್ಯವನ್ನು ಸ್ವೀಕರಿಸುವ ಸೊಗಸನ್ನು ಕಾಣಬಹುದು.

ಕ್ಷೇತ್ರದ ಉತ್ಸವಗಳು

‘ಕಾರಿಂಜ’ ಎಂದೊಡನೆಯೇ ತಾಲೂಕಿನಲ್ಲಿ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಕ್ಷೇತ್ರಕ್ಕೆ ಧಾವಿಸುವ ಸಂಭ್ರಮದ ತುಡಿತ ಕಂಡು ಬರುತ್ತದೆ. ಶಿವ-ಪಾರ್ವತಿಯರು ಭಕ್ತರ ಅಭಿಷ್ಟಗಳನ್ನು ಈಡೇರಿಸಿದರೆ, ಗಿರಿಶಿಖರದ ಮೇಲಿನ ಸೌಂದರ್ಯವು ನೋಡುಗರ ಮನ ಸೆಳೆಯುವಂತಿದೆ. ವಾರ್ಷಿಕ ಶಿವರಾತ್ರಿ, ಜಾತ್ರೆ, ರಥೋತ್ಸವಗಳು ಆಧ್ಯಾತ್ಮಿಕ ಚಿಂತನೆ ಮೈಗೂಡಿಸಿಕೊಂಡ ಸಾವಿರಾರು ಭಕ್ತಾದಿಗಳನ್ನು ಇಲ್ಲಿಗೆ ಆಕರ್ಷಿಸುತ್ತದೆ. ಕಾರಿಂಜ ಬೆಟ್ಟದಲ್ಲಿ ನಿಂತು ಸುರ್ಯೋದಯ ಮತ್ತು ಸೂರ್ಯಾಸ್ತಮಾನದ ಸುಂದರ ದೃಶ್ಯಗಳನ್ನು ಕಾಣುವುದೇ ಒಂದು ಸೊಬಗು.

ಇಲ್ಲಿನ ವಾರ್ಷಿಕ ಜಾತ್ರೋತ್ಸವದ ಸಂದರ್ಭದಲ್ಲಿ ನಡೆಯುವ ಪಾರ್ವತಿ-ಪರಮೇಶ್ವರರ ಭೇಟಿಯು ಪ್ರಕೃತಿ-ಪುರುಷ ಸಮಾಗಮದ ಅದ್ಭುತ ಕಲ್ಪನೆಯಂತೆ ಕಂಡು ಬಂದು ಭಾವುಕರನ್ನು ಪೌರಾಣಿಕ ಲೋಕಕ್ಕೆ ಕೊಂಡೊಯ್ಯುತ್ತದೆ. ತುಲಾಭಾರ ಮತ್ತು ಶಯನಸೇವೆ ದೇವಸ್ಥಾನದಲ್ಲಿ ಮಹಾಶಿವರಾತ್ರಿ ದಿನ ನಡೆಯುವ ತುಲಾಭಾರ ಸೇವೆಗೆ ಮಹತ್ವವನ್ನು ಕಲ್ಪಿಸಲಾಗಿದೆ. ಈ ಪೂಜೆಯಿಂದ ಸರ್ವ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಜನರಲ್ಲಿದೆ. ವರ್ಷದಲ್ಲಿ ಒಂದು ದಿನ ಮಾತ್ರ ನಡೆಯುವ ಈ ಸೇವೆಯನ್ನು ಮಾಡಲು ಮುಂಗಡ ನಿಗದಿಪಡಿಸಿಕೊಳ್ಳಬೇಕು. ಇನ್ನೊಂದು ಪ್ರಮುಖ ಸೇವೆ ಪಾರ್ವತಿ ದೇವಿಗೆ ಸಲ್ಲಿಸುವ ಶಯನ ಸೇವೆ ಪೂಜೆ. ಇದು ಮಹಾಶಿವರಾತ್ರಿಯ ಚಂದ್ರಮಂಡಲ ಉತ್ಸವದ ದಿನ ನಡೆಯುತ್ತದೆ. ಈ ಸೇವೆಯಿಂದ ಅವಿವಾಹಿತ ಯುವತಿಯರಿಗೆ ಕಂಕಣ ಬಲ ಕೂಡಿಬರುತ್ತದೆ. ಸಂಸಾರದಲ್ಲಿ ಇರುವ ಘರ್ಷಣೆಗಳು ದೂರವಾಗುತ್ತದೆ ಎಂಬ ಪ್ರತೀತಿ ಇದೆ.

ಕ್ಷೇತ್ರದಲ್ಲಿ ನಡೆಯುವ ಇತರ ಆಚರಣೆಗಳು ಯಾವುದೆಂದರೆ ಸೌರ ಯುಗಾದಿ , ವೃಷಭ ಸಂಕ್ರಮಣ, ಪ್ರಧೋಷ ಪೂಜೆ,ಸಿಂಹ ಸಂಕ್ರಮಣ, ನಾಗರ ಪಂಚಮಿ, ಗಣೇಶ ಚತುರ್ಥಿ, ಕದಿರುತ್ಸವ, ನವರಾತ್ರಿ ಉತ್ಸವ, ಮಹಾನವಮಿ, ವಿಜಯದಶಮಿ, ದೀಪಾವಳಿ, ಕಾರ್ತಿಕ ಪೂಜೆ, ಲಕ್ಷದೀಪೋತ್ಸವ, ಕೊಡಮಣಿತ್ತಾಯ ದೈವಗೆ ನೇಮ, ಸುಬ್ರಹ್ಮಣ್ಯ ಷಷ್ಠಿ.

ಪ್ರತಿದಿನವೂ ಇಲ್ಲಿ ಬೆಳಿಗ್ಗೆ ೯:೩೦ ರಿಂದ ೧೨:೦೦ ರವರೆಗೆ , ಮಧ್ಯಾಹ್ನ ೧೨:೦೦ ಗಂಟೆಗೆ ಮಹಾಪೂಜೆ , ಸಂಜೆ ೬:೦೦ ರಿಂದ ೭:೩೦ ರವರೆಗೆ ದೇವಸ್ಥಾನ ತೆರೆದಿರುತ್ತದೆ.

ಪ್ರತಿಯೊಬ್ಬರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಹೋಗಿ ಆ ಸುಂದರ ಪ್ರಕೃತಿಯ ಮಧ್ಯ ನೆಲೆನಿಂತ ಆ ಶಿವ ಪಾರ್ವತಿಯರ ಆಶೀರ್ವಾದ ಪಡೆದು ಪಕೃತಿಯ ಸೌಂದರ್ಯವನ್ನು ಸವಿಯಬೇಕು ಹಾಗೂ ವಾನರಗಳ ನೈವೇದ್ಯ ಭಕ್ಷಣೆ ನೋಡಲು ಆಕರ್ಷಣೀಯ .

naadle If you like this article, click on the button below