RJ ರೂಪೇಶ್ ಶೆಟ್ಟಿ ಮತ್ತು ಅವರ ಆ ದಿನಗಳು.

Share This:
Upcoming and Ongoing events

View More Events

Want to Promote your Event, contact Naadle at 9035030300 or Email us at info@naadle.com

ಯಾವುದೇ ನಟನಿಗೆ ದೊಡ್ಡ ಪರದೆಯ ಮೇಲೆ ಅಭಿನಯಿಸುವುದು ಅಷ್ಟು ಸುಲಭದ ಮಾತಲ್ಲ, ಅದರ ಹಿಂದೆ ಅವರ ಕಷ್ಟ, ಪರಿಶ್ರಮ, ಅವಮಾನಗಳು ಮತ್ತು ನೋವುಗಳು ಇರುತ್ತದೆ. ಈ ತರಹ ಒಂದು ಒತ್ತಿನ ಊಟಕ್ಕೂ ಕಷ್ಟ ಪಟ್ಟು ತಮ್ಮ ಸ್ವಂತ ಪ್ರತಿಭೆಯಿಂದ ಇಂದು ತುಳುಚಿತ್ರರಂಗದಲ್ಲಿ ಮಿಂಚುತ್ತಿರುವ ನಟ RJ ರೂಪೇಶ್ ಶೆಟ್ಟಿ.ರೂಪೇಶ್ ಶೆಟ್ಟಿ ಎಂದ ಕೊಡಲೇ ನಮಗೆ ನೆನಪಾಗುವುದು Big FM ನ ‘Big Coffee’ ಕಾರ್ಯಕ್ರಮ ಇದರಲ್ಲಿ ಎಲ್ಲರ ಜೊತೆ ತಮ್ಮ ಪ್ರೀತಿಯ ಮತ್ತು ಸಂತ್ವಾನದ ಮಾತುಗಳನ್ನಾಡುವ ಆ ಆಕರ್ಷಕ ಧ್ವನಿ. VJಯಾಗಿ ವೃತ್ತಿಜೀವನ ಪ್ರಾರಂಭಿಸಿದ ಅವರು ನಂತರ RJ, ಗಾಯಕ ಮತ್ತು ನಟನಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ನಾವು ಒಬ್ಬ ನಿರೂಪಕ ಅಥವಾ RJ ಯಾ ಬಗ್ಗೆ ಯೋಚಿಸುವಾಗ ನಮಗೆ ಮೊದಲು ನೆನಪಿಗೆ ಬರುವ ವ್ಯಕ್ತಿ RJ ರೂಪೇಶ್ ಶೆಟ್ಟಿ, ನಾವು ಅವರ ಯಶಸ್ಸನ್ನು ಮಾತ್ರ ನೋಡಿದ್ದೇವೆ ಆದರೆ ಹಿಂದಿನ ಕಷ್ಟದ ಮಾರ್ಗಗಳು ಯಾರಿಗೂ ತಿಳಿದಿಲ್ಲ.ಅವರು Naadle.com ನೊಂದಿಗೆ ಸಂದರ್ಶನದಲ್ಲಿ ತಮ್ಮ ಜೀವನದ ಬಗ್ಗೆ ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
RJ ಯಿಂದ ಸಿನಿಮಾ ರಂಗದ ನಿಮ್ಮ ಪ್ರಯಾಣದ ಬಗ್ಗೆ ಹೇಳಿ.

ಇದೊಂದು ಸುದೀರ್ಘ ಪ್ರಯಾಣ, ಕೇರಳದ ಕಾಸರಗೋಡು ನಲ್ಲಿ ವಿದ್ಯಾಭ್ಯಾಸವನ್ನು ಪ್ರಾರಂಭಿಸಿದ ನಾನು, ನಂತರ ಮಂಗಳೂರಿಗೆ ಸ್ಥಳಾಂತರಗೊಂಡು ರೋಸೇರಿಯಾ ಕಾಲೇಜಿನಲ್ಲಿ ವಾಣಿಜ್ಯ ವಿಭಾಗವನ್ನು ಆಯ್ದುಕೊಂಡು ಪಿಯುಸಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದೆ ಮತ್ತು ಪದವಿ(ಬಿಬಿಎಂ) ಶಿಕ್ಷಣವನ್ನು ಮಂಗಳೂರಿನ SDM ಕಾಲೇಜ್ ನಲ್ಲಿ ಪಡೆದೆ. ಬಿಬಿಎಂ ಮಾಡುತ್ತಿರುವಾಗಲೇ ಮಾಧ್ಯಮದ ಕಡೆಗೆ ಆಕರ್ಷಿತನಾಗಿದ್ದ ನಾನು ಹೆಚ್ಚು ಒಲವು ಹೊಂದಿದ್ದು  ತುಂಬಾ ಷೋಗಳಿಗೆ ನಿರೂಪಕನಾಗಿ ಸಂದರ್ಶನಗಳನ್ನು ನೀಡಿದೆ ಆದರೆ ಎಲ್ಲವೂ ತಿರಸ್ಕಾರಗೊಂಡವು ಆದರೂ ದೃತಿ ಕೆಡಲಿಲ್ಲ ಮತ್ತೆ ಪ್ರಯತ್ನಿಸುತ್ತಿದ್ದೆ ನನ್ನ ಪ್ರಯತ್ನ ಒಂದಲ್ಲ ಒಂದು ದಿನ ಕೈಹಿಡಿಯುತ್ತದೆ ಎಂಬ ನಂಬಿಕೆಯಿತ್ತು. ಒಮ್ಮೆ ದಿನಪತ್ರಿಕೆಯಲ್ಲಿ ಜಾಹೀರಾತು ಒಂದನ್ನು ನೋಡಿದೆ ನಮ್ಮಟಿವಿ ಚಾನೆಲ್ ಗೆ ನಿರೂಪಕ ಬೇಕಾಗಿದ್ದಾರೆ ಎಂದು, ಹೋಗಿ ಸಂದರ್ಶನ ನೀಡಿದೆ ಮತ್ತು ಆ ಸಂದರ್ಶನದಲ್ಲಿ ಆಯ್ಕೆಯಾದೆ. ಆಯ್ಕೆಯಾದರು ಕೂಡ ಪ್ರಸ್ತಾಪ ಪಡೆಯಲು ದೀರ್ಘ ಸಮಯವೇ ಹಿಡಿಯಿತು. ಒಮ್ಮೆ ನಮ್ಮ ಟಿವಿ ಚಾನೆಲ್ ನಲ್ಲಿ ನಿರೂಪಕರು ರಜೆಯಲ್ಲಿದ್ದರು ಆಗ ಅವರಿಗೆ ಕೂಡಲೇ ನಿರೂಪಕರು ಬೇಕಾಗಿದ್ದರು ಆಗ ಅವರು ನನ್ನನ್ನು ಕೇಳಿದರು, ಕೂಡಲೇ ಒಪ್ಪಿಕೊಂಡೆ ಇಲ್ಲಿಂದ ನನ್ನ ನಿರೂಪಕನಾಗಿ ಪ್ರಯಾಣ ಆರಂಭವಾಯಿತು. ನಂತರ, ನಾನು ‘ಬಲೇ ತೆಲಿಪಾಲೆ‘ ಕಾರ್ಯಕ್ರಮದಲ್ಲಿ ನಿರೂಪಕನಾದೆ, ಇದು ನನ್ನ ಜೀವನದ ದಿಕ್ಕನ್ನೇ ಬದಲಾಯಿಸಿತು. ನಂತರ ಬಹಳಷ್ಟು ಅವಕಾಶಗಳು ಸಿಕ್ಕಿದ್ದವು. ನಾನು ತುಳುವಿನಲ್ಲಿ ಏನನ್ನಾದರೂ ಮಾಡಬೇಕೆಂದು ಬಯಸಿದ್ದೆ ಆದರೆ ನಾನು ಏನು ಮಾಡಬೇಕೆಂದು ನನಗೆ ನಿಖರವಾಗಿ ತಿಳಿದಿರಲಿಲ್ಲ. ಆ ದಿನಗಳಲ್ಲಿ ಮಲಯಾಳಂ ಆಲ್ಬಂ ಗೀತೆಗಳು ಬಹಳ ಪ್ರಸಿದ್ಧವಾಗಿದ್ದವು. ನಾನು ಅದರಿಂದ ಸ್ಫೂರ್ತಿ ಪಡೆದು ತುಳು ಆಲ್ಬಮ್ ಹಾಡಗಳನ್ನೂ ಮಾಡಲು ನಿರ್ಧರಿಸಿದೆ. ಮೊದಲಿಗೆ ನಾನು ‘ಕೋಲಾವರಿ ಡಿ‘ ನ ರೀಮೇಕ್ ಆವೃತ್ತಿಯನ್ನು ಹಾಡಿದ್ದೆ, ಇದು onlineನಲ್ಲಿ ದೊಡ್ಡ ಹಿಟ್ ಆಗಿತ್ತು. ನಂತರ ನಾನು ‘ಕಾಲೇಜ್ ಡ್ ಒಂಜಿ ಪೊಣ್ಣು‘ ಹಾಡನ್ನು ಹಾಡಿದೆ ಅದಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಹಾಗಾಗಿ ತುಳು ಆಲ್ಬಂ ಹಾಡುಗಳನ್ನು ಮಾಡಲು ನಾನು ನಿರ್ಧರಿಸಿದೆ. ನನ್ನ ಮೊದಲ ಆಲ್ಬಂ ಹಾಡು ‘ಮೋಕೆ‘, ಸುಮಾರು 5000 ಸಿಡಿಗಳು ಮಾರಾಟವಾಗುವ ಮೂಲಕ ಎಲ್ಲರ ಬೆಂಬಲದಿಂದ ನನಗೆ ಭಾರೀ ಪ್ರತಿಕ್ರಿಯೆ ಸಿಕ್ಕಿತು ಮತ್ತು ನನ್ನ ಎರಡನೇ ಆಲ್ಬಮ್ ‘ಪೊರ್ಲು – ಒಂಚೂರ್ ಮಾರ್ಲ್‘ ಬಿಡುಗಡೆ ಮಾಡಲು ಸ್ಫೂರ್ತಿ ನೀಡಿತು. ಈ ಆಲ್ಬಮ್ ಆರು ಹಾಡುಗಳನ್ನು ಹೊಂದಿದ್ದು, ಎಲ್ಲವನ್ನೂ ಬರೆದು, ನಿರ್ದೇಶಿಸಿ ಹಾಡಿದ್ದೇನೆ. ‘ದಿಬ್ಬಣ‘ ನನ್ನ ಮೊದಲ ಸಿನೆಮಾವಾದರೂ, ಎಲ್ಲರಿಗೂ ಪರಿಚಯವಾದ ನನ್ನ ಮೊದಲ ಸಿನಿಮಾ ‘ಐಸ್ ಕ್ರೀಮ್‘ . ನಾನು ನಮ್ಮ ಟಿವಿಯಲ್ಲಿ ನಿರೂಪಕನಾಗಿರುವಾಗ ನಿರ್ದೇಶಕ ದೇವರಾಜ್ ಅವರನ್ನು ಭೇಟಿಯಾದೆ, ಅವರು ನನ್ನನ್ನು ಕನ್ನಡ ಸಿನಿಮಾಗಳಿಗೆ ಅಭಿನಯಿಸಲು ಕೇಳಿದರು, ಅವರ ನಿರ್ದೇಶನದ ಕನ್ನಡ ಸಿನಿಮಾ ‘ಡೇಂಜರ್ ಜೋನ್‘ ನಲ್ಲಿ ಅಭಿನಯಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದೆ, ನಂತರ ‘ನಿಶಬ್ಧ-2‘ ನಲ್ಲಿಯೂ ಅಭಿನಯಿಸಿದೆ. ಅಷ್ಟು ಮಾತ್ರವಲ್ಲದೆ ಕನ್ನಡ ಸಿನಿಮಾ ‘ಸ್ಮೈಲ್ ಪ್ಲೀಸ್‘ ಮತ್ತು ಕೊಂಕಣಿ ಸಿನಿಮಾ ‘ಅಶೆಂ ಜಲ್ಮ್ ಕಶೆಂ‘ ನಲ್ಲಿಯೂ ಅಭಿನಯಿಸಿದ್ದೇನೆ. ಪ್ರಸ್ತುತ ನಾನು ಅಮ್ಮೆರ್ ಪೊಲೀಸ ಮತ್ತು ಕನ್ನಡ ಸಿನಿಮಾ ಗೋಲ್ ಮಾಲ್ ಬ್ರದರ್ಸ್ ನಲ್ಲಿ ಅಭಿನಯಿಸುತ್ತಿದ್ದೇನೆ. ಗೋಲ್ ಮಾಲ್ ಸಿನಿಮಾದಲ್ಲಿ ಸೃಜನ್ ಲೋಕೇಶ್ ಮತ್ತು ಚಿಕ್ಕಣ್ಣ ಅವರೊಂದಿಗೆ ನಾನು ಅಭಿನಯಿಸುತ್ತಿದ್ದೇನೆ.ನಿಮ್ಮ ಕನಸೇನು?

ನನ್ನ ಕನಸು ‘ ನಾನು ಒಬ್ಬ ತಾರೆಯಾಗಬೇಕಿಲ್ಲ ಆದರೆ ಒಬ್ಬ ಪರಿಪೂರ್ಣ ನಟನಾಗಬೇಕು‘ ಮತ್ತು ನಾನು ನನ್ನ ಪ್ರತಿಭೆಯನ್ನು ಪೂರ್ಣವಾಗಿ ಪ್ರದರ್ಶನ ಮಾಡುವ ಚಿತ್ರಗಳಲ್ಲಿ ಅಭಿನಯಿಸಲು ಬಯಸುತ್ತೇನೆ.ನಿಮ್ಮ ಬೆಂಬಲ ಯಾರು?

ನನ್ನಂತಹ ತುಂಬಾ ಜನರಿದ್ದಾರೆ ಸಿನಿಮಾ ಹಿನ್ನಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ನಾನು ಸಿನೆಮಾಗಳಲ್ಲಿ ಅಭಿನಯಿಸಲು ತುಂಬಾ ಉತ್ಸುಕನಾಗಿದ್ದೆ, ಆದರೆ ನಿಖರವಾಗಿ ನಾನು ನಟನಾಗಿರಬೇಕೆಂದು ಯೋಚಿಸಲಿಲ್ಲ ಆದರೆ ನಾನು ನಟನಾಗಿರಲು ಬಯಸಿದ್ದೆ. ನಾನು ಕುಟುಂಬದ ಬೆಂಬಲವನ್ನು ಹೊಂದಿದ್ದೆ ಆದರೆ ಚಿತ್ರರಂಗದಿಂದ ಬಂದ ಯಾವುದೇ ಕುಟುಂಬದ ಹಿನ್ನೆಲೆ ನನಗೆ ಇರಲಿಲ್ಲ. ಅವಕಾಶಕ್ಕಾಗಿ ಕಾಯುವ ಬದಲು, ನನ್ನ ಸ್ವಂತ ಅವಕಾಶವನ್ನು ನಾನು ಸೃಷ್ಟಿಸಿದೆ. ಅದಕ್ಕಾಗಿಯೇ ನಾನು ಆಲ್ಬಮ್ ಗೀತೆಗಳನ್ನು ತಯಾರಿಸಲು ಪ್ರಾರಂಭಿಸಿದೆ. ನನ್ನ ಹೋರಾಟದಲ್ಲಿ, ನಾನು ನನ್ನ ವೇದಿಕೆಯನ್ನು ಸೃಷ್ಟಿಸಿದೆ ಹಾಗೂ ನಾನು ಕಾರ್ಯನಿರ್ವಹಿಸಬಹುದೆಂದು ತೋರಿಸಲು ಬಯಸುತ್ತೇನೆ. ನನ್ನ ಪ್ರಯಾಣದ ಉದ್ದಕ್ಕೂ ನನಗೆ ಸಾಕಷ್ಟು ಬೆಂಬಲ ನೀಡಿದ ಅನೇಕ ಸ್ನೇಹಿತರನ್ನು ನಾನು ಹೊಂದಿದ್ದೇನೆ. ಅವರ ಬೆಂಬಲದಿಂದ ನಾನು ಟೆಲ್ಲಿ ಫಿಲ್ಮ್ಗಳನ್ನು ಮಾಡಿದೆ, ಇದರಿಂದ ನಾನು ಮಂಗಳೂರಿನಲ್ಲಿ ನನ್ನ ಸ್ವಂತ ಮಾರುಕಟ್ಟೆಯನ್ನು ಸೃಷ್ಟಿಸಿದೆ. ಇದು ಚಲನಚಿತ್ರಗಳಲ್ಲಿ ಅಭಿನಯಿಸಲು ನನಗೆ ಸಹಾಯ ಮಾಡಿತು. ನಾವು ಅವಕಾಶಕ್ಕಾಗಿ ನಿರೀಕ್ಷಿಸಬಾರದು ಎಂದು ನಾನು ನಂಬುತ್ತೇನೆ, ನಾವು ಅವಕಾಶವನ್ನು ನಮ್ಮದೇ ಆದ ರೀತಿಯಲ್ಲಿ ರಚಿಸಬೇಕು.ನಿಮ್ಮ ಯಶಸ್ಸನ್ನು ಯಾರಿಗೆ ಅರ್ಪಿಸಲು ನೀವು ಬಯಸುತ್ತೀರಿ?

ಮೊದಲನೆಯದಾಗಿ ಇದು ಖಂಡಿತ ನನ್ನ ಯಶಸ್ಸಲ್ಲ ಆದರೆ ಒಮ್ಮೆ ನನ್ನ ಪ್ರಯಾಣದಲ್ಲಿ ಹಿಂದಿರುಗಿ ನೋಡಿದಾಗ ಏನೋ ಸಾದಿಸಿದ್ದೇನೆ ಎಂದು ಅನಿಸುತ್ತದೆ. ದಿನದಿಂದ ದಿನಕ್ಕೆ ನಾನು ಬಹಳ ಸುಧಾರಿಸಿದ್ದೇನೆ ಹಾಗೂ ಈಗ ನಾನು ಏನು ಮಾಡಿದ್ದೇನೆ ಅದರ ಬಗ್ಗೆ ನನಗೆ ತುಂಬಾನೇ ತೃಪ್ತಿಯಿದೆ. ನಾನು ಬಂದಿದ್ದು ಕಾಸರಗೋಡಿನ ಉಪ್ಪಳ ಎಂಬ ಹಳ್ಳಿಯಿಂದ ಇಲ್ಲಿ ನನ್ನ ೭ನೇ ತರಗತಿಯವರೆಗೂ ಚಲನಚಿತ್ರಗಳನ್ನು ವೀಕ್ಷಿಸಲು ವಿದ್ಯುತ್ ನ ಸೌಲಭ್ಯವೇ ಇರಲಿಲ್ಲ. ಅಲ್ಲಿಂದ ಬಂದ ನಾನು ೫ ಸಿನೆಮಾಗಳಲ್ಲಿ ನಾಯಕನಟನಾದೆ, ಈಗ ನನ್ನ ಜೀವನದಲ್ಲಿ ತುಂಬಾನೇ ವ್ಯತ್ಯಾಸಗಳಾಗಿವೆ. ನನ್ನ ಎಲ್ಲ ಯಶಸ್ಸನ್ನು ನನ್ನ ತಾಯಿಗೆ ಅರ್ಪಿಸುತ್ತೇನೆ ಆಕೆ ಈಗ ನನ್ನ ಜೊತೆಗಿಲ್ಲ ಆದರೆ ನಾನು ಶಾಲೆಗೆ ಹೋಗುತ್ತಿದ್ದ ಸಮಯದಲ್ಲಿ ಏಕಪಾತ್ರಾಭಿನಯ ಮತ್ತು ಯಕ್ಷಗಾನದಲ್ಲಿ ಬಹುಮಾನ ಪಡೆಯುತ್ತಿದ್ದೆ ಅದನ್ನು ನೋಡಿ ಸಂತೋಷ ಪಟ್ಟು ಆಕೆ ನನ್ನನ್ನು ಬೆಂಬಲಿಸುತ್ತಿದ್ದಳು. ತಾಯಿಯ ಮರಣದ ನಂತರ ನಾನು ಮಂಗಳೂರಿಗೆ ಸ್ಥಳಾಂತರವಾದೆ. ಅದೇ ರೀತಿ, ನನ್ನ ಬೆಂಬಲಿಗರಿಗೆ ನನ್ನ ಯಶಸ್ಸನ್ನು ಸಮರ್ಪಿಸಲು ನಾನು ಬಯಸುತ್ತೇನೆ, ಅವರು ನನಗೆ ಮಹತ್ತರವಾಗಿ ಬೆಂಬಲ ನೀಡಿದ್ದಾರೆ ಮತ್ತು ಇಂದು ನಾನು ಏನೇ ಸಾಧಿಸಿದ್ದರು ಅದು ಜನರ ಬೆಂಬಲದಿಂದ ಮಾತ್ರ .ನಮ್ಮ ಟಿವಿ ನನಗೆ ಮೊದಲ ಬಾರಿ ವೇದಿಕೆ ನೀಡಿತು ಮತ್ತು ನನ್ನ ನಿರೂಪಣೆಯ ಮೂಲಕ ನಾನು ಜನರನ್ನು ತಲುಪಿದೆ. ನಾನು ನಮ್ಮ ಟಿವಿ ಮತ್ತು ನನ್ನ ಗೆಳೆಯರಿಗೆ ಧನ್ಯವಾದ ಹೇಳಬೇಕು. ಆಲ್ಬಮ್ ಮಾಡುತ್ತಿರುವಾಗ ನನ್ನ ಬಳಿ ಯಾವುದೇ ಹಣವನ್ನು ಹೊಂದಿರಲಿಲ್ಲ, ಆದರೆ ನನ್ನ ಎಲ್ಲ ಸ್ನೇಹಿತರು ನನಗೆ ಸಾಕಷ್ಟು ಬೆಂಬಲ ನೀಡಿದ್ದರು. ನಿಮ್ಮ ಭವಿಷ್ಯದ ಯೋಜನೆಗಳು ಯಾವುವು?

ನಾನು ಇನ್ನು ಏನು ಸಾಧಿಸಿಲ್ಲ ಬಹಳಷ್ಟು ಬಾಕಿಯಿದೆ ಸಾಧಿಸಲು, ವಿವಿಧ ಭಾಷೆಗಳಲ್ಲಿ ಅಭಿನಯಿಸಲು ಬಯಸುತ್ತೇನೆ. ನಾನು ಕನ್ನಡ ಮತ್ತು ತುಳು ಚಿತ್ರಗಳಲ್ಲಿ ಅಭಿಯಸಿದ್ದೇನೆ, ನಾನು ನಟನೆಗೆ ಮಾತ್ರ ಕೇಂದ್ರೀಕರಿಸುತ್ತೇನೆ ಮತ್ತು ಅದೇರೀತಿ ನಿರೂಪಣೆ ಮತ್ತು RJ ವೃತ್ತಿಯನ್ನು ಮಾಡುತ್ತೇನೆ ಅದನ್ನು ತಕ್ಷಣ ಬಿಡಲು ಸಾಧ್ಯವಿಲ್ಲ ಅದು ನನಗೆ ಕಷ್ಟದ ಸಮಯದಲ್ಲಿ ಅನ್ನಕೊಟ್ಟ ಕೆಲಸ. ನಿರೂಪಣೆ ನನ್ನ ಹವ್ಯಾಸ, ನಿರೂಪಣೆ, RJ ಮತ್ತು ಆಕ್ಟಿಂಗ್ ಅನ್ನು ನಾನು ಪ್ರೀತಿಸುತ್ತೇನೆ. ಒಂದು ವೇಳೆ ಸಿನಿಮಾದ ವೇಳಾಪಟ್ಟಿಯಿಂದ ಸಮಯ ಸಿಗದಿದ್ದಾರೆ ಆಗ ನಿರ್ಧಿಷ್ಟ ಸಮಯದವರೆಗೆ ನಾನು ನಿರೂಪಣೆಯನ್ನು ನಿಲ್ಲಿಸಬಹುದು ಆದರೆ ನಿರೂಪಣೆಯನ್ನು ನಾನು ಖಂಡಿತ ನಿಲ್ಲಿಸುದಿಲ್ಲ. ನಾನು ಇಂದು ನಟನಾದರೂ ಜನ ನನ್ನನ್ನು ಗುರುತಿಸುದು ನಿರೂಪಣೆ ಮತ್ತು RJ ಆಗಿಯೇ. ಕೋಸ್ಟಲ್ ವುಡ್ ನಲ್ಲಿ ಸಾಕಷ್ಟು ರಾಜಕೀಯ ನಡೆಯುತ್ತದೆ ಎಂದು ಕೇಳುತ್ತೇವೆ, ಅದರ ಬಗ್ಗೆ ನಿಮ್ಮ ಅಭಿಪ್ರಾಯ ಏನು?

ರಾಜಕಾರಣದ ಬಗ್ಗೆ ಏನನ್ನಾದರೂ ಕಾಮೆಂಟ್ ಮಾಡಲು ನಾನು ದೊಡ್ಡ ವ್ಯಕ್ತಿಯಲ್ಲ, ನಾನು ಒಬ್ಬ ನಟನಾಗಿರುತ್ತೇನೆ. ಕೆಲಸ ಮಾಡುವುದು ಮತ್ತು ಹೋಗುವುದು ಮಾತ್ರ ನನ್ನ ಕೆಲಸ. ಆದರೆ ನಾವು ಒಗ್ಗಟ್ಟನ್ನು ಕುರಿತು ಮಾತನಾಡುವಾಗ, ಎಲ್ಲಾ ಉದ್ಯಮಗಳಿಗೆ ಅದು ಅಗತ್ಯವೆಂದು ನಾನು ಭಾವಿಸುತ್ತೇನೆ ಆದರೆ ತುಳು ಚಿತ್ರರಂಗಕ್ಕೆ ಇದು ತುಂಬಾ ಅವಶ್ಯಕವಾಗಿದೆ. ಏಕೆಂದರೆ ನಾವು ಮಾರುಕಟ್ಟೆಯಲ್ಲಿ ಸಂಪೂರ್ಣವಾಗಿ ನಿಲ್ಲಲಿಲ್ಲ, ನಮ್ಮ ಭವಿಷ್ಯ ಏನು ಎಂದು ನಮಗೆ ಗೊತ್ತಿಲ್ಲ ಹಾಗೂ ತುಳು ಹಿಟ್ ಚಿತ್ರದ ರೇಟಿಂಗ್ ಹೆಚ್ಚು ತಲುಪಿಲ್ಲ ಇಲ್ಲಿಯವರೆಗೆ. ನನ್ನ ಫೇಸ್ಬುಕ್ ಪೇಜ್ ಮೂಲಕ ಎಲ್ಲಾ ತುಳು ಚಲನಚಿತ್ರಗಳನ್ನು ಬೆಂಬಲಿಸಲು ಪ್ರಯತ್ನಿಸುತ್ತೇನೆ. ನಾವು ಎಲ್ಲಿಗೆ ಹೋಗುತ್ತೇವೆ ರಾಜಕೀಯವು ಇದ್ದೆ ಇರುತ್ತದೆ ಆದರೆ ತುಳು ಚಿತ್ರರಂಗದಲ್ಲಿ ರಾಜಕೀಯ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ, ಎಲ್ಲರೂ ಒಟ್ಟಿಗೆ ಮತ್ತು ಒಂದಾಗಿರಲಿ ಎಂದು ಆಸೆಪಡುತ್ತೇನೆ.ನಿಮ್ಮ ಜೀವನದಲ್ಲಿ ಮರೆಯಲಾಗದ ಘಟನೆ?

ನನ್ನ ಜೀವನದ ಸಂತೋಷದ ಸಮಯ ನಾನು ನಮ್ಮ ಟಿವಿಯಲ್ಲಿ ಮೊದಲ ಬಾರಿಗೆ ನಿರೂಪಣೆ ಮಾಡಿದ್ದೂ ಆಗ ನನ್ನ ಕನಸು ನನಸಾಯಿತು ಎನ್ನುವ ಸಂತೋಷ ಮತ್ತು ಅನಿರೀಕ್ಷಿತವಾಗಿ ಕನ್ನಡ ಸಿನಿಮಾದಲ್ಲಿ ನಟಿಸಲು ಅವಕಾಶ ಬಂದಾಗ. ನನ್ನ ಜೀವನದ ಅತ್ಯಂತ ದುಃಖದ ಸಮಯ ನಾನು ತಾಯಿಯನ್ನು ಕಳೆದುಕೊಂಡ ದಿನ ನನ್ನ ಜೀವನದಲ್ಲಿ ದೊಡ್ಡ ನಷ್ಟವಾಗಿದೆ ಮತ್ತು ನನ್ನ ವೃತ್ತಿರಂಗಕ್ಕೆ ಬಂದಾಗ ನಾನು ಅವಕಾಶಕ್ಕಾಗಿ ತುಂಬಾ ನಿರ್ದೇಶಕರನ್ನು ಭೇಟಿಯಾಗಿದ್ದೇನೆ ಎಲ್ಲರೂ ನಿಮ್ಮ ಎಲ್ಲ ಅಭಿನಯ ಆಗಬಹುದು ಆದರೆ ನೀವು ನಮ್ಮ ಸಿನಿಮಾದ ಕಥೆಗೆ ಸೂಕ್ತವಾಗುವುದಿಲ್ಲ ಎಂದು ಹೇಳಿ ತಿರಸ್ಕಾರ ಮಾಡುತಿದ್ದರು. ಆಗ ನನಗೆ ತುಂಬಾ ಬೇಸರವಾಗಿತ್ತು ಆದರೆ ಅದನ್ನೇ ಸವಾಲಾಗಿ ತೆಗೆದುಕೊಂಡು ತುಂಬಾ ಅಭ್ಯಾಸಗಳನ್ನು ಮಾಡಿದೆ. ಸಾರ್ವಜನಿಕರಿಗೆ ನಿಮ್ಮ ಸಂದೇಶ ಏನು?

ಚಿತ್ರರಂಗ ಅಥವಾ ನಟನಾಗಲು ಬಯಸುವವರಿಗೆ ನನ್ನ ಒಂದು ಚಿಕ್ಕ ಸಲಹೆ ವೈಫಲ್ಯವನ್ನು ಅನುಭವಿಸಲು ಸಿದ್ಧರಿರಬೇಕು ಏಕೆಂದರೆ ನೀವು ಒಂದು ಸಿನಿಮಾದಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯವಿಲ್ಲ. ನೀವು ನಟನಾಗಬೇಕಾದರೆ ಪೂರ್ಣ ಪ್ರಮಾಣದಲ್ಲಿ ನೀವು ನಿಮ್ಮನ್ನು ಸಮರ್ಪಿಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸು ಕಂಡ ವ್ಯಕ್ತಿಗಳನ್ನು ಉದಾಹರಣೆಯಾಗಿ ತೆಗೆಯೆದುಕೊಳ್ಳಬೇಡಿ, ಯಾರು ಜೀವನದಲ್ಲಿ ತುಬಾ ಕಷ್ಟಪಟ್ಟು ಮೇಲೆ ಬಂದಿದ್ದಾರೆ ಅವರನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ. ಪ್ರತಿಯೊಬ್ಬರೂ ತಮ್ಮ ಆರಂಭಿಕ ಹಂತದಲ್ಲಿ ವೈಫಲ್ಯವನ್ನು ಅನುಭವಿಸಲೇಬೇಕು ಅದು ನಮ್ಮನ್ನು ಬಿಟ್ಟು ಹೋಗುವುದಿಲ್ಲ, ಇದಕ್ಕೆ ವಿಜಯ ಸೇತುಪತಿ ಅವರು ಉದಾಹರಣೆ ಇವರು ಚಿತ್ರರಂಗದಲ್ಲಿ 40 ವರ್ಷಗಳ ನಂತರ ನಟರಾದವರು. ಅಭಿನಯ ಅನ್ನುದು ಒಂದು ದೊಡ್ಡ ಪ್ರಯಾಣ, ಒಂದೇ ದಿನದಲ್ಲಿ ಕಲಿತು ಮುಗಿಸುವಂತಹದಲ್ಲ, ವೈಫಲ್ಯದ ಬಗ್ಗೆ ಯೋಚಿಸಬೇಡಿ ಕಷ್ಟಪಟ್ಟು ಕೆಲಸ ಮಾಡಿ ಜೀವನದಲ್ಲಿ ಒಂದಲ್ಲ ಒಂದು ದಿನ ಯಶಸ್ವಿಯಾಗುತ್ತೀರಿ. ನನ್ನ ಪ್ರತಿಯೊಬ್ಬ ಬೆಂಬಲಿಗರಿಗೂ ನಾನು ಧನ್ಯವಾದ ಹೇಳುತ್ತೇನೆ. ನನ್ನ ಸಿನಿಮಾ ಬಿಡುಗಡೆಯಾದಾಗ ಅವರು ನನಗೆ ಕರೆ ಮಾಡಿ ಈ ಸಿನಿಮಾದ ತುಂಬಾ ಚೆನ್ನಾಗಿದೆ ಮತ್ತು ಒಳ್ಳೆಯ ಕಥೆ ಎಂದು ಹೇಳುತ್ತಾರೆ, ಇವೆಲ್ಲವೂ ಭವಿಷ್ಯದಲ್ಲಿ ಉತ್ತಮ ವಿಷಯಗಳನ್ನು ಮಾಡಲು ನನ್ನನ್ನು ಪ್ರೇರೇಪಿಸುತ್ತದೆ. ನಿಶಬ್ದ-೨ ಬಿಡುಗಡೆಯಾದಾಗ ನಾನು ಬೆಂಗಳೂರಿನಲ್ಲಿದ್ದೆ ಆದರೆ ನನ್ನ ಮಂಗಳೂರಿನ ಬೆಂಬಲಿಗರು ಆ ಸಿನೆಮಾವನ್ನು ತುಂಬಾ ಪ್ರೋತ್ಸಾಹಿಸಿದರು ಮತ್ತು ಸಿನಿಮಾ ಮಂಗಳೂರಿನಲ್ಲಿ ಹೌಸ ಫುಲ್ ಪ್ರದರ್ಶನ ಕಂಡಿತು. ನಿಮ್ಮ ಈ ಪ್ರೀತಿ ಮತ್ತು ಪ್ರೋತ್ಸಾಹಕ್ಕೆ ನಾನು ಆಭಾರಿಯಾಗಿದ್ದೇನೆ ಮತ್ತು ನೀವು ನನ್ನ ಜೊತೆಯಾಗಿರುವುದೇ ನನಗೆ ಆಶೀರ್ವಾದ. ನಿಮ್ಮ ಮುಂಬರುವ ಎಲ್ಲ ಯೋಜನೆಗಳಿಗೆ Naadle.com ತಂಡವು ಶುಭಹಾರೈಸುತ್ತದೆ. ನೀವು ಹೇಳಿದಂತೆ ನೀವು ಮುಂದೆ ಒಬ್ಬ ಪರಿಪೂರ್ಣ ನಟನಾಗಿ, ನೀವು ಈಗಾಗಲೇ ‘ಪರಿಪೂರ್ಣ ನಟ’ ನಮಗೆ. ಚಿತ್ರರಂಗಕ್ಕೆ ಬರುವ ಎಲ್ಲ ಯುವನಟರಿಗೆ ನೀವು ಒಂದು ಉದಾಹರಣೆಯಾಗಿದ್ದೀರಿ. ನಿಮ್ಮಂತಹ ಬಹುಮುಖ ಪ್ರತಿಭೆಯನ್ನು ಪಡೆಯಲು ತುಳು ಚಿತ್ರರಂಗ ಅದೃಷ್ಟ ಮಾಡಿದೆ.
naadle If you like this article, click on the button below

Offers

Want to Add your Offers, contact Naadle at 9035030300 or Email us at info@naadle.com