ಹಿಂದೂ ಧರ್ಮದಲ್ಲಿದ್ದ ಕೆಳವರ್ಗದ ಜನರನ್ನು ಅನ್ಯಧರ್ಮಕ್ಕೆ ಮತಾಂತರಗೊಳ್ಳುವುದನ್ನು ತಪ್ಪಿಸಿದ ಧೀಮಂತ ವ್ಯಕ್ತಿ ಇವರು.

Share This:

ಸುಮಾರು 150 ವರ್ಷಗಳ ಹಿಂದೆ ಕೇರಳ ರಾಜ್ಯದಲ್ಲಿ ’ನಾವು ಸಮಾಜದ ಮೇಲ್ವರ್ಗಕ್ಕೆ ಸೇರಿದವರು’ ಎಂದು ತಮ್ಮನ್ನು ತಾವೇ ಪ್ರತಿಷ್ಠಾಪಿಸಿದ ಒಂದು ವರ್ಗದವರು ಮತ್ತೊಂದು ವರ್ಗದವರ ಮೇಲೆ ದೌರ್ಜನ್ಯ ನಡೆಸುತ್ತಿದ್ದ ಕಾಲದಲ್ಲಿ ‘ನಾರಾಯಣ ಗುರು’ ಎಂಬ, ಒಬ್ಬ ಸಮಾಜಿಕ ಸುಧಾರಕ ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು ಕೇರಳದ ಸಮಸ್ತ ಕೆಳವರ್ಗದ ಜನರನ್ನು ಮೇಲೆತ್ತಲು ಮಾಡಿದ ಪ್ರಯತ್ನವನ್ನು ಮಹಾನ್ ಸಾಧನೆ ಎನ್ನಬಹುದು. “ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ತತ್ವವನ್ನು ಪ್ರತಿಪಾದಿಸಿ, ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿ, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡ ಧೀಮಂತ ವ್ಯಕ್ತಿ ’ಬ್ರಹ್ಮಶ್ರೀ ನಾರಾಯಣ ಗುರುಗಳು’.

 

19ನೇ ಶತಮಾನದ ಅಂತ್ಯ ಮತ್ತು 20ನೇ ಶತಮಾನದ ಆರಂಭದಲ್ಲಿ ಐರೋಪ್ಯರು ಭಾರತದ ರಾಜಕೀಯ ಸ್ವಾತಂತ್ರ್ಯವನ್ನು ಕಿತ್ತುಕೊಂಡು ಭಾರತೀಯರನ್ನು ಗುಲಾಮರನ್ನಾಗಿಸಿದ ಕರಾಳ ಇತಿಹಾಸವಾಗಿತ್ತು. ಇದು ರಾಜಕೀಯರಂಗದ ಗೋಳಾದರೆ ಸಾಮಾಜಿಕ ಕ್ಷೇತ್ರದ್ದು ಇನ್ನೂ ನೋವಿನ ಕಥೆಯಾಗಿತ್ತು. ಆಗಿನ ಕೇರಳದಲ್ಲಿ ಇಡೀ ಭಾರತದಲ್ಲಿಯೇ ಕಂಡರಿಯದ ಅಮಾನುಷ ವರ್ತನೆ, ನಂಬೂದರಿ ಎಂಬ ಬ್ರಾಹ್ಮಣ ವರ್ಗದಿಂದ  ಜಾತಿಯಲ್ಲಿ ಹಿಂದುಳಿದ ವರ್ಗದವರ ಮೇಲೆ, ಶೂದ್ರರ ಮೇಲೆ, ಅಸ್ಪ್ರಷ್ಯರ ಮೇಲೆ ಮತ್ತು ಸ್ತ್ರೀಯರ ಮೇಲೆ ಶೋಷಣೆ ನಡೆದಿತ್ತು. ಕೇರಳದ ಬಹುಸಂಖ್ಯಾತ ಈಳವ (ಬಿಲ್ಲವ) ಜನಾಂಗದವರು ಕೂಡಾ ಅಸ್ಪೃಶ್ಯ ವರ್ಗಕ್ಕೆ ಸೇರಿದ್ದರು. ದೇವಾಲಯಗಳಿಗೆ ಪ್ರವೇಶವಿಲ್ಲ, ಮೇಲು ಜಾತಿಯವರು ನಡೆಯುವ ದಾರಿಯಲ್ಲಿ ನಡೆಯುವಂತಿಲ್ಲ, ಮಹಿಳೆಯರು ಕುಪ್ಪಸ್ಸ ತೊಡುವಂತಿಲ್ಲ, ಆಭರಣ ಧರಿಸುವಂತೆಯೇ ಇರಲಿಲ್ಲ, ಕಾಲಿಗೆ ಚಪ್ಪಲಿ ಹಾಕುವಂತಿಲ್ಲ. ಇನ್ನೊಂದು ವಿಚಾರವೇನೆಂದರೆ, ಇಂತಹ ಕ್ರೂರ ಕಟ್ಟುಪಾಡುಗಳೆಲ್ಲವು ಹಿಂದೂ ಧರ್ಮದ ಕೆಳವರ್ಗದ ಜನರಿಗೆ ಮಾತ್ರ ಅನ್ವಯವಾಗಿತ್ತು, ಮುಸ್ಲಿಂ ಹಾಗು ಕ್ರೈಸ್ತ ಸಮುದಾಯವನ್ನು ಹೀಗೆ ಕಾಣುತ್ತಿರಲಿಲ್ಲ. ಕೆಳವರ್ಗದ ಜನರು  ಮುಸ್ಲಿಂ ಹಾಗು ಕ್ರೈಸ್ತ ಸಮುದಾಯಕ್ಕೆ ಮತಾಂತರ ಹೊಂದುವ ಮೂಲಕ ಈ ಕಟ್ಟುಪಾಡುಗಳಿಂದ ತಪ್ಪಿಸಿಕೊಳ್ಳಲು ಅವಕಾಶವಿತ್ತು. ಅವಿದ್ಯೆಯಿಂದಾಗಿ ಸಾಮಾಜಿಕವಾಗಿ ಕ್ರೂರ ಶೋಷಣೆಗೆ ಒಳಗಾದ ಈ ಈಳವರಿಗೆ ತಮ್ಮ ದುಃಸ್ಥಿತಿಯ ಅರಿವೂ ಕೂಡಾ ಇರಲಿಲ್ಲ. ಈ ಮೌಢ್ಯತೆಯನ್ನು ಕಂಡ ಸ್ವಾಮಿ ವಿವೇಕಾನಂದರೇ “ಕೇರಳವೊಂದು ಹುಚ್ಚರ ಆಸ್ಪತ್ರೆ ” ಎಂಬ ಉದ್ಗಾರ ತೆಗೆದಿದ್ದರು. ಅಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ವಿಷ ವೃಕ್ಷವು ಇಡೀ ಶೂದ್ರ ಜನಸಮುದಾಯವನ್ನು ಉಸಿರುಗಟ್ಟಿ ಸಾಯಿಸುತ್ತಿದ್ದ ಘೋರ ಕ್ರೌರ್ಯದ ತುರಿಯಾವಸ್ಥೆಯಲ್ಲಿ `ಈಳವ’ ಎಂಬ ಅಸ್ಪ್ರಶ್ಯ ಜಾತಿಯಲ್ಲೇ ನಾರಾಯಣ ಎಂಬ ಪವಿತ್ರಾತ್ಮನ ಜನನವಾಯಿತು. ಕೆಲವರ್ಗದವರು ಹಿಂದೂ ಧರ್ಮದಲ್ಲಿ ಉಳಿದುಕೊಳ್ಳಲು ಕಾರಣವಾದವರು ಮತ್ತು ಸಮಾಜದಲ್ಲಿ ರಕ್ತಪಾತವಿಲ್ಲದೆ ಕ್ರಾಂತಿ ಮಾಡಿದವರೇ ಶ್ರೀ ನಾರಾಯಣ ಗುರುಗಳು.

ಕೇರಳದಲ್ಲಿ 1856ನೇ  ಇಸವಿಯ  ಒಣಂ ಹಬ್ಬದ ಮೂರನೇ ದಿನ ಹುಣ್ಣಿಮೆಯ ಶುಭ ಸಂದರ್ಭದಂದು ಮಾದನ್ ಆಶಾನ್ ಮತ್ತು ಕುಟ್ಟಿ ಅಮ್ಮಾಳ್ ದಂಪತಿಯ ಕೊನೆಯ ಪುತ್ರನಾಗಿ ವಿಶ್ವ ಮಾನವತೆಯ ಹರಿಕಾರನೆಂದು ಎಲ್ಲೆಡೆ ಪರಿಗಣಿಸಲ್ಪಟ್ಟ , ದೀನ ದಲಿತರಿಗೆ, ಅಸ್ಪ್ರಶ್ಯರಿಗೆ ಬದುಕಿನ ಹೊಸ ಭರವಸೆಯನ್ನು ಒದಗಿಸಿ ಕೊಟ್ಟ ಶ್ರೀ ನಾರಾಯಣ ಗುರು ಮಹಾನ್ ಸಂತನ ಜನನವಾಯಿತು. ಶಿವಗಿರಿಯಿಂದ 45 ಕಿಲೋಮೀಟರ್ ಉತ್ತರಕ್ಕೆ, ತಿರುವನಂತಪುರದಿಂದ 12 ಕಿಲೋಮೀಟರ್ ದೂರದ ಉತ್ತರಪೂರ್ವ ಸೀಮೆಯಲ್ಲಿರುವ ಚೆಂಬಲಂತಿ ಎಂಬ ಗ್ರಾಮದಲ್ಲಿ 20-08-1856ರಂದು ನಾರಾಯಣ ಗುರುಗಳು ಜನಿಸಿದರು. ಅವರು ಹುಟ್ಟಿ ಬೆಳೆದ ಮನೆ ಇಂದಿಗೂ ಸುರಕ್ಷಿತವಾಗಿ ಕಾಯ್ದಿರಿಸಲಾಗಿದೆ. ತಂದೆ  ಮಾದನ್ ಆಶಾನ್ ಕೇವಲ ಕೃಷಿಕರಷ್ಟೇ ಆಗಿರಲಿಲ್ಲ, ಅವರು ಖಗೋಲಶಾಸ್ತ್ರ, ಆಯುರ್ವೇದದಲ್ಲಿ ತಜ್ನರಾಗಿದ್ದರು. ಆಶನ್ ಎಂದರೆ ಆಚಾರ್ಯ ಎಂಬರ್ಥ. ವಾರಕ್ಕೊಮ್ಮೆ ಅವರ ಮನೆಯ ಚಾವಡಿಯಲ್ಲಿ ಹಳ್ಳಿಯ ಜನ  ಮಾದನ್ ಆಶಾನ್ ಅವರ ರಾಮಾಯಣ, ಮಹಾಭಾರತ ಪ್ರವಚನವನ್ನು ಕೇಳಲು ಸೇರುತ್ತಿದ್ದರು. ನಾರಾಯಣ ಗುರುಗಳನ್ನು ಮುದ್ದಿನಿಂದ `ನಾಣು’ ಎಂದು ಕರೆಯುತ್ತಿದ್ದರು. ಕೇರಳದಲ್ಲಿ ಸಾಂಪ್ರದಾಯಿಕ ಕಲಿಕೆ ಎಂದರೆ ಸಂಸ್ಕ್ರತವನ್ನು ಕಲಿಯುವುದಾಗಿತ್ತು. ನಾರಾಯಣ ಗುರು ಸುಲಭವಾಗಿ ಸಂಸ್ಕ್ರತ ಭಾಷೆ ಮತ್ತು ವ್ಯಾಕರಣವನ್ನು ಕಲಿತರು. ಸಿದ್ಧ ರೂಪಮ್,ಬಾಲಪ್ರಭೋದಮ್, ಮತ್ತು ಅಮರ ಕೋಶವನ್ನೂ ಕಲಿತು, ಸಂಸ್ಕ್ರತ ಮತ್ತು ಮಲೆಯಾಳಮ್ ಮಾತ್ರವಲ್ಲದೆ ತಮಿಳನ್ನೂ ಚೆನ್ನಾಗಿ ಕಲಿತರು. ಸ್ವಪ್ರಯತ್ನದಿಂದ ತಮಿಳಿನ ಶ್ರೇಷ್ಠ ಗ್ರಂಥಗಳಾದ `ತೋಲ್ಕಾಪ್ಪಿಯನ್’, `ನನ್ನುಲ್’, `ಸಿಲಪ್ಪದಿಕಾರಮ್’, `ಮನಿಮೇಕಲಮ್’, `ತಿರುಕ್ಕುರಲ್’, ಮತ್ತು `ತಿರುವಾಚಕಮ್’, ಓದಿದರು.

ನಾರಾಯಣ ಸ್ವಾಮಿಯವರ ಮನಸ್ಸನ್ನು ಅರಿಯದ ಮನೆಯವರು ಅವರಿಗೆ ಮದುವೆಯಾಗುವಂತೆ ಒತ್ತಾಯಿಸಿದರು. ಆದಕಾರಣ, ರಾಮಕೃಷ್ಣ ಪರಮಹಂಸರು ಶಾರದಾ ದೇವಿಯನ್ನು ಮದುವೆಯಾದಂತೆ ಇವರೂ ಮದುವೆಯಾದರು. ಆ ಕಾಲದಲ್ಲಿ ವರನ ಸಹೋದರಿಯು ವಧುವಿಗೆ `ಪುತವಾ’,ಅಂದರೆ ವಧುವಿನ ಬಟ್ಟೆಗಳು, ಕೊಟ್ಟು ಮದುವೆಯಾಗುವ ಸಂಪ್ರದಾಯವಿತ್ತು. ನಾರಾಯಣ ಗುರುಗಳು ಮದುವೆಗೆ ತಾನೇ ಸ್ವತಃ ಹೋಗಿರಲಿಲ್ಲ. ನಾಣುವಿಗೆ ಮದುವೆ  ಮಾಡಿ ಸಂಸಾರದ ಬಂಧನದಲ್ಲಿರಿಸುವ ಮನೆಯವರ ಪ್ರಯತ್ನ ವ್ಯರ್ಥವಾಯಿತು. “ನಾವೆಲ್ಲ ಬೇರೆ ಬೇರೆ ಉದ್ದೇಶಕ್ಕೆ ಹುಟ್ಟಿದ್ದೇವೆ. ನಿಮ್ಮ ದಾರಿ ಬೇರೆ ನನ್ನ ದಾರಿ ಬೇರೆ. ನಿಮ್ಮ ದಾರಿಯಲ್ಲಿ ಮುನ್ನಡೆಯುವುದರಿಂದ ನಿಮಗೆ ಹಿತವಾಗಬಹುದು. ನನ್ನ ದಾರಿಯಲ್ಲಿ ಹೋಗಲು ನನ್ನನ್ನು ದಯಮಾಡಿ ಬಿಟ್ಟು ಬಿಡಿ” ಎಂದು ಮನೆಯನ್ನು ಬಿಟ್ಟು ಹೊರನಡೆದರು. ಬ್ರಹ್ಮ ಸತ್ಯದ ಶೋಧಕ್ಕಾಗಿ ಸುತ್ತಾಡಿದರು. ಕಾಡಿನಲ್ಲಿ ಗುಹೆಗಳಲ್ಲಿ ನಿರಾತಂಕವಾಗಿ ಜೀವಿಸಿ ಮರುತ ಮಲೈಯಲ್ಲಿ ಧಾನ್ಯ ಮಗ್ನರಾಗಿರುತ್ತಿದ್ದಾಗ ಅವರ ಅಕ್ಕಪಕ್ಕದಲ್ಲಿ ಎರಡು ಚಿರತೆಗಳು ಅಂಗರಕ್ಷಕರಂತೆ ನಿಂತಿದ್ದವು.

ಶ್ರೀ ನಾರಾಯಣ ಗುರುಗಳು ಅರುವಿಪ್ಪುರಂನಲ್ಲಿ ಆಳವಾಗಿ ಧ್ಯಾನಿಸುತ್ತ ಸ್ವಲ್ಪ ದಿನಗಳನ್ನು ಕಳೆದರು. ಇಲ್ಲಿ ಅವರು ಬೃಹತ್ ಸಮಾಜ ಕ್ರಾಂತಿಯ ಬೀಜವನ್ನು ಬಿತ್ತಿದರು. ಅವರು ಬದುಕುತ್ತಿರುವ ಸಮಾಜವು ಜಾತಿ ಎಂಬ ರಾಕ್ಷಸನ ಬಲೆಯಲ್ಲಿ ಸಿಕ್ಕಿ ಬಿದ್ದಿತ್ತು. ಕೆಳ ಜಾತಿಯವರಿಗೆ ದೇವಸ್ಥಾನಗಳಲ್ಲಿ ಪ್ರವೇಶವಿರಲಿಲ್ಲ. ಅವರಿಗೆ ಅಲ್ಲಿ ಪೂಜೆ ಮಾಡುವ ಹಕ್ಕನ್ನು ನಿರಾಕರಿಸಲಾಗಿತ್ತು. ದಲಿತ ಜನಾಂಗಕ್ಕೆ ದೇವಾಲಯವನ್ನು ಪ್ರವೇಶಿಸಿ ಪೂಜೆಗೈಯುವ ವ್ಯವಸ್ಥೆಯನ್ನು ಕಲ್ಪಿಸಬೇಕೆಂಬ ಪರಿಕಲ್ಪನೆಯೊಂದಿಗೆ ಶಿವರಾತ್ರಿಯ ದಿನ ಶ್ರೀ ನಾರಾಯಣ ಗುರುಗಳು ಅರುವಿಪ್ಪುರಂನಲ್ಲಿ ವಿಜೃಂಭಣೆಯೊಂದಿಗೆ ಶಿವಮೂರ್ತಿಯನ್ನು ಪ್ರತಿಷ್ಟಾಪಿಸಿದರು. ಮೇಲ್ಜಾತಿ ದೇವಸ್ಥಾನಗಳಿಗೆ ನಿರಾಕರಿಸಲ್ಪಟ್ಟ ಪ್ರವೇಶವು ಅರುವಿಪ್ಪುರಂನಲ್ಲಿ ಎಲ್ಲರಿಗೂ ಮುಕ್ತವಾಗಿ ತೆರೆಯಲ್ಪಟ್ಟಿತು. ಈ ಧಾರ್ಮಿಕ ಕ್ರಿಯೆಯು ಹಿಂದೂ ಸಮಾಜದಲ್ಲಿ ಧರ್ಮ ಪುನರ್ ಪ್ರತಿಷ್ಟಾಪನೆಗೆ ದಾರಿ ಮಾಡಿಕೊಟ್ಟಿತು. ನಂಬೂದರಿ ಬ್ರಾಹ್ಮಣರೊಬ್ಬರು `ನಿಮಗೆ ಮೂರ್ತಿ ಪ್ರತಿಷ್ಟಾಪನೆ ಮಾಡಲು ಯಾವ ಹಕ್ಕಿದೆ?’ ಎಂದು ಕೇಳಿದಾಗ ನಾರಾಯಣ ಗುರುಗಳು: `ನಾನು ನ್ ಇಮ್ಮ ಶಿವನನ್ನು ಪ್ರತಿಷ್ಠಾಪಿಸಲಿಲ್ಲ ಕೇವಲ ಈಳವ ಶಿವನನ್ನು ಪ್ರತಿಷ್ಠಾಪಿಸಿದ್ದೇನೆ.’ ಎಂದು ಸಮರ್ಥನೆಯನ್ನು ನೀಡಿದರು.  ಕ್ರಿ.ಶ 1912 ರಲ್ಲಿ ಮಂಗಳೂರಿನ ಕುದ್ರೋಳಿ ದೇವಾಲಯವನ್ನು ಸ್ಥಾಪಿಸಿದರು. ದಕ್ಷಿಣ ಭಾರತ ಮತ್ತು  ಶ್ರೀಲಂಕಾದಲ್ಲಿ  ಸುಮಾರು 60ಕ್ಕಿಂತ ಹೆಚ್ಚು ದೇವಾಲಯಗಳ ಸ್ಥಾಪನೆಗೆ ಗುರುಗಳು ಕಾರಣರಾದರು. ಅಸ್ಪೃಷ್ಯರನ್ನು, ಸಮಾಜದಲ್ಲಿ ಹಿಂದುಳಿದ ವರ್ಗದವರನ್ನು ಸಂಘಟಿಸಿ, ಪರೋಪಕಾರವೇ ತಮ್ಮ ಜೀವನದ ಧ್ಯೇಯವೆಂದು ಸಾರಿದರು. ಫೆಬ್ರವರಿ, 1924 ರಲ್ಲಿ, 2 ದಿನಗಳ ಸರ್ವಧರ್ಮಗಳ ಸಮ್ಮೇಳನವನ್ನು ಆಯೋಜಿಸಿದರು. ನಾರಾಯಣಗುರುಗಳಿಗೆ ಬ್ರಹ್ಮ ವಿದ್ಯಾಲಯವೆಂಬ ಸಂಸ್ಥೆಯನ್ನು ಸ್ಥಾಪಿಸಿ, ಅಲ್ಲಿ, ಸರ್ವಧರ್ಮಗಳ ಬಗ್ಗೆ, ಅಧ್ಯಯನ ಮಾಡುವ ಒಂದು ಅಭಿಯಾನವನ್ನು ಪ್ರಾರಂಭಿಸಬೇಕೆಂಬ ಮಹದಾಶೆಯಿತ್ತು. ಆದರೆ, ಅದು, ಅವರ ಜೀವಿತ ಅವಧಿಯಲ್ಲಿ ಸಾಕಾರಗೊಳ್ಳಲಿಲ್ಲ. ಗುರುಗಳ ಮರಣದ ಬಳಿಕ, ಅವರ ಹಿಂಬಾಲಕರು ಆ ಕನಸನ್ನು ಸಾಕಾರಗೊಳಿಸಿದರು. ” ದೇವರ ಸೇವೆಮಾಡಿದರೆ, ತನ್ನದೊಬ್ಬನದೇ ಏಳಿಗೆ, ಉದ್ಧಾರವಾಗಬಹುದು, ಆದರೆ, ದೇಶ ಸೇವೆಮಾಡಿದರೆ, ಹಲವರ ಕಲ್ಯಾಣ ನಿಶ್ಚಯ, ಆದ್ದರಿಂದ ದೇಶಸೇವೆ, ಮತ್ತು ಈಶಸೇವೆಗಳ ಸಮನ್ಯವೇ ನಮ್ಮ ಗುರಿಯಾಗಿರಬೇಕು” ಎಂದು ತಮ್ಮ ಜೀವನದುದ್ದಕ್ಕೂ ಒತ್ತಿ-ಒತ್ತಿ ಹೇಳುತ್ತಿದ್ದರು.

ವರ್ಕಲ ಬೆಟ್ಟಗಳನ್ನು `ಶಿವಗಿರಿ’ ಎಂದು ಕರೆಯಲಾಗುತ್ತದೆ. ವರ್ಕಲ ತ್ರಿವೇಂದ್ರಂನಿಂದ ಉತ್ತರಕ್ಕೆ 20 ಮೈಲುಗಳಷ್ಟು ದೂರವಿರುವ ಕರಾವಳಿ ತೀರದ ಪಟ್ಟಣವಾಗಿದೆ. ಶಿವಗಿರಿಯು ಶಿವ ಮತ್ತು ಶಾರದಾ ದೇವಿಗೆ ಅರ್ಪಿತವಾಗಿರುವ ಪವಿತ್ರ ಕ್ಷೇತ್ರ. ಗುರುಗಳು ದಕ್ಷಿಣ ಕಾಶಿಯಾದ ವರ್ಕಲಕ್ಕೆ ಬಂದು 1904ರಲ್ಲಿ ಧಾರ್ಮಿಕ ಮಠವೊಂದನ್ನು ಸ್ಥಾಪಿಸಿದರು, ನಂತರ 1912ರಲ್ಲಿ ಶಿವಗಿರಿಯಲ್ಲಿ ಶಾರದಾ ದೇವಸ್ಥಾನವನ್ನು ಸ್ಥಾಪಿಸಿದರು. ಗುರುಗಳಿಗೆ ಎಲ್ಲ ಸಮುದಾಯದಿಂದ ಶಿಷ್ಯರಿದ್ದರು. ಹರಿಜನರೂ ಕೂಡಾ ಗೀತೆಯ ಶ್ಲೋಕಗಳನ್ನು, ಉಪನಿಷತ್ತುಗಳನ್ನು ಪಠಿಸಬಹುದಿತ್ತು; ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಬಹುದಿತ್ತು. ಗುರುಗಳ ದೃಷ್ಟಿಯಲ್ಲಿ ಬಡವರ, ದುರ್ಬಲರ ಸೇವೆಯೇ ದೇವರ ಸೇವೆಯಾಗಿತ್ತು. ಗುರುಗಳು ಶಿವಗಿರಿಯನ್ನು ಸ್ಥಾಪಿಸಿದ ಮೇಲೆ ಅಲವೇಯಿಗೆ ವಾಸ್ತವ್ಯವನ್ನು ಬದಲಾಯಿಸಿ ಅದನ್ನು ಪ್ರಧಾನ ಧಾರ್ಮಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಮಾಡಿದರು. ಅವರ ಶ್ರೇಷ್ಠ ಗುರುಗಳಾದ ಶಂಕರಾಚಾರ್ಯರ ನೆನಪಿಗೆ ಅಲವೇಯಿಯಲ್ಲಿ ಅದ್ವೈತ ಆಶ್ರಮವನ್ನು ಸ್ಥಾಪಿಸಿದರು. ಅಲವೇಯಿ ಅದ್ವೈತ ಆಶ್ರಮವು ಸಂಸ್ಕೃತ ಮತ್ತು ಅದ್ವೈತ ತತ್ವ ಶಾಸ್ತ್ರವನ್ನು ಪ್ರಚಾರಪಡಿಸುವ ಮತ್ತು ಅಭ್ಯಾಸಿಸುವ ಕೇಂದ್ರವಾಯಿತು. ಗುರುಗಳು 1912ರಷ್ಟೊತ್ತಿಗೆ ತಮ್ಮ ಮುಖ್ಯ ಕಚೇರಿಯನ್ನು ಬದಲಾಯಿಸಿದರು. ಅವರು ಇನ್ನೂ ಮುಂದೆ ಉತ್ತರಕ್ಕೆ ಅಲೆದಾಡಿದರು. ಅವರು ಎಲ್ಲರಿಂದ ಗುರು ಎಂದು ಗೌರವಿಸಲ್ಪಟ್ಟರು. ಅಲವೇಯಿಯನ್ನು ತಮ್ಮ ವಾಸ ಸ್ಥಾನವನ್ನಾಗಿ ಮಾಡಿಕೊಂಡು, ನದಿ ತೀರದಲ್ಲಿ ಒಣಗಿದ ತಾಳೆ ಗರಿಗಳಿಂದ ಮಾಡಿದ ಸರಳ ಮಾಡಿನಡಿಯಲ್ಲಿ ಅವರು ಪುನಃ ಧ್ಯಾನದಲ್ಲಿ ಮಗ್ನರಾದರು.

 

“ಕೇರಳದ ನಾರಾಯಣ ಗುರುಗಳಿಗೆ ಸರಿಸಮಾನರಾದ ಮಹಾಪುರುಷನನ್ನು ನಾನು ಎಲ್ಲೂ ಕಂಡಿಲ್ಲ” ಎಂದು ವಿಶ್ವಕವಿ ರವಿಂದ್ರನಾಥ ಠಾಗೂರರು ಉದ್ಗರಿಸಿದ್ದರು. ಗಾಂಧೀಜಿಯವರು ತಮ್ಮ ಹರಿಜನೋದ್ಧಾರಕ್ಕಾಗಿ ಸ್ಫೂರ್ತಿ ಪಡೆದದ್ದು ನಾರಾಯಣ ಗುರುಗಳಿಂದ. “ನಾರಾಯಣ ಗುರುಗಳ ಸಾಮಾಜಿಕ ಕಾರ್ಯಕ್ರಮಗಳಿಗೂ ಗಾಂಧೀಜಿಯವರ ಸಾಮಾಜಿಕ ಚಟುವಟಿಕೆಗಳಿಗೂ ಬಹಳಷ್ಟು ಹೋಲಿಕೆ ಇರುವುದನ್ನು ನಾವು ಕಾಣಬಹುದು” ಎಂದು ರೋಮನ್ ರಾಲೆಂಡ್ ಉದ್ಗರಿಸಿದ್ದಾರೆ.

 

1928 ರ  ಫೆಬ್ರುವರಿಯಲ್ಲಿ ಗುರುಗಳು ತೀವ್ರ ಅನಾರೋಗ್ಯಕ್ಕೆ ತುತ್ತಾದರು. ಯಾವುದೇ ರೀತಿಯ ಚಿಕಿತ್ಸೆ ಫಲಕಾರಿಯಾಗದೆ 1928 ರ ಸೆಪ್ಟೆಂಬರ್ 20ರಂದು ಸಂಜೆ ನಾಲ್ಕರ ಹೊತ್ತಿಗೆ ತಮ್ಮ 72ನೇ ವಯಸ್ಸಿನಲ್ಲಿ ಮಹಾಸಮಾಧಿಯನ್ನು ಹೊಂದಿದರು. ದೇವಸ್ಥಾನದ ಬಗೆಗಿನ ನಾರಾಯಣ ಗುರುಗಳ ಪರಿಕಲ್ಪನೆಯೇ ಕ್ರಾಂತಿಕಾರಿ. ಕಳವಂಕೋಡುವಿನಲ್ಲಿ ಕನ್ನಡಿಯನ್ನು ಸ್ಥಾಪಿಸುವ ಮೂಲಕ ಕೊನೆಯ ಪ್ರತಿಷ್ಠಾಪನೆ ನೆರವೇರಿಸಿದರು. ಆ ಕನ್ನಡಿಯ ನಡುವೆ ಸತ್ಯ, ಧರ್ಮ, ಶಾಂತಿ, ದಯೆ ಎಂಬ ಸಂದೇಶ ಸಾರುವ ಫಲಕವನ್ನಷ್ಟೇ ಇರಿಸಿದ್ದರು. ಕಾರಮಕ್ಕುವಿನಲ್ಲಿ ಒಂದು ನಂದಾದೇಪನ್ನಷ್ಟೇ ಹಚ್ಚಿದ್ದರು. ತಮ್ಮ ಜೀವಮಾನದ ಕೊನೆಗಾಲದಲ್ಲಿ ಅರಿವಿನ ಸಂಕೇತವಾಗಿ ಶಿವಗಿರಿಯಲ್ಲಿ ಸರಸ್ವತಿಯ ಮೂರ್ತಿ ಪ್ರತಿಷ್ಠಾಪಿಸಿದರು. ದೇವಾಲಯಗಳು ಕೇವಲ ಪೂಜೆ ಪುನಸ್ಕಾರಗಳಲ್ಲಿ ಮುಳುಗಿ ಹೋಗುವ ಬದಲಿಗೆ ಸಾಮೂಹಿಕ ಪ್ರಾರ್ಥನಾ ಮಂದಿರಗಳಾಗಬೇಕು ಅನ್ನುವುದು ಗುರುಗಳ ಚಿಂತನೆ ಆಗಿತ್ತು. ದೇವಸ್ಥಾನಗಳು ಅಧ್ಯಯನ ಕೇಂದ್ರವಾಗಬೇಕು ಎಂದು ನಾರಾಯಣ ಗುರುಗಳ ಬಯಕೆಯಾಗಿತ್ತು.

“ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎಂಬ ಸಂದೇಶ ಸಾರಿದ ನಾರಾಯಣ ಗುರುಗಳನ್ನು ಕೇರಳದ ಬಸವಣ್ಣ ಎಂದೇ ಹೇಳಬಹುದು. ಇಂತಹ ಮಹಾನ್ ಚೇತನವೊಂದನ್ನು ಗುರುವಾಗಿ ಪೂಜಿಸುವುದು ನಮ್ಮೆಲ್ಲರ ಭಾಗ್ಯ. ಅವರು ಕೇವಲ ಈಳವ ಅಥವಾ ಬಿಲ್ಲವ ಜನಾಂಗಕ್ಕೆ ಸೀಮಿತವಾದರೆ ಅವರ ತತ್ವಗಳಿಗೆ ಅನ್ಯಾಯವಾಗುತ್ತದೆ. ಇನ್ನೂ ಮುಖ್ಯವಾಗಿ ಗುರುವನ್ನು ಕೇವಲ ಮೂರ್ತಿ ಮಾಡಿ ಕೇವಲ ಕಲ್ಲಿಗೆ ಪೂಜೆ ಸಲ್ಲದಿರಲಿ, ಅವರ ಸಂದೇಶಗಳನ್ನು ಮೈಗೂಡಿಸಿ ನಮ್ಮಲ್ಲಿ ಅಳವಡಿಸೋಣ. ಸಾಧ್ಯವಾದಷ್ಟು ಅವರು ಹೇಳಿಕೊಟ್ಟ ಶಾಂತಿ ಪಥದಲ್ಲಿ ನಡೆಯೋಣ. ಆ ದಾರಿಯಲ್ಲಿ  ನಡೆದು ಕೃತಾರ್ಥರಾಗಲು ಪ್ರಯತ್ನಿಸೋಣ. ನಾರಾಯಣ ಗುರುಗಳು ಕೇವಲ ಒಂದು  ಜನಾಂಗದ ಗುರುವಲ್ಲ, ಮಾನವ ಜನಾಂಗದ ಗುರು ,ವಿಶ್ವ ಮಾನವ ಗುರು , ಸಾಮಾಜಿಕ ಕ್ರಾಂತಿಯ ಹರಿಕಾರ.

naadle If you like this article, click on the button below