ಅಂತರಾಷ್ಟ್ರೀಯ ಮಟ್ಟದಲ್ಲಿ ಮಂಗಳೂರಿಗೆ ಕೀರ್ತಿ ತಂದು ಕೊಟ್ಟ ಈ ಗ್ರಾಮೀಣ ಹುಡುಗಿಗೆ ನಮ್ಮೆಲ್ಲರ ಪ್ರೋತ್ಸಾಹ ಅಗತ್ಯ.

Share This:

ನಮಗೆಲ್ಲರಿಗೂ ಪವರ್ ಲಿಫ್ಟಿಂಗ್ ಬಗ್ಗೆ ತಿಳಿದಿರುವ ವಿಷಯ. ಇದು ಸ್ಪರ್ಧಾತ್ಮಕ ತೂಕ ಎತ್ತುವಿಕೆಯ ಒಂದು ಕ್ರೀಡೆ, ಇದರಲ್ಲಿ ಸ್ಪರ್ಧಿಗಳು ಮೂರು ರೀತಿಯ ಎತ್ತುವಿಕೆಯನ್ನು ಒಂದು ಸೆಟ್ ಅನುಕ್ರಮದಲ್ಲಿ ಪ್ರದರ್ಶಿಸುತ್ತಾರೆ. ಹಾಗಂತ ಇದು ಸುಲಭದ ಕೆಲಸವೇನಲ್ಲ! ಪವರ್ಲಿಫ್ಟರ್ ಆದವರು ಇಂದು ಎಲ್ಲಾ ಸ್ಪರ್ಧೆಗಳಲ್ಲಿ ಹೊಸ ಪ್ರವೃತ್ತಿಯನ್ನು ಸೃಷ್ಟಿಸಿದ್ದಾರೆಂದರೆ ಇದಕ್ಕೆ ಮುಖ್ಯವಾಗಿ ಸಮರ್ಪಣೆ ಮತ್ತು ಪೂರ್ವಾಭ್ಯಾಸ ಅಗತ್ಯವಾಗಿ ಬೇಕಾಗುತ್ತದೆ. ಮಂಗಳೂರಿನಲ್ಲಿ ಪವರ್ಲಿಫ್ಟಿಂಗ್ ಬಗ್ಗೆ ಯಾರಿಗಾದರು ತಿಳಿದಿದ್ದರೆ ಪವರ್ಲಿಫ್ಟರ್ ಅಕ್ಷತಾ ಪೂಜಾರಿಯವರ ಪರಿಚಯ ನಿಮಗೆ ಇದ್ದೇ ಇರುತ್ತೆ. ಬಡ ಕೃಷಿ ಕುಟುಂಬದಲ್ಲಿ ಬೆಳೆದು ಇಷ್ಟರ ಮಟ್ಟಿಗೆ ಸಾಧನೆ ಮಾಡಿದ್ದಾರೆ ಎಂದರೆ ಅದು ಏನು ಸಾಮಾನ್ಯ ವಿಷಯವಲ್ಲ. ಇವರೇ ನಿಜವಾದ ಚ್ಯಾಂಪಿಯನ್.

ಅಕ್ಷತಾ ಪೂಜಾರಿಯವರು ಪವರ್ ಲಿಫ್ಟಿಂಗ್ ಚಾಂಪಿಯನ್ ಆಗಿದ್ದು, ಈವರೆಗೆ 70 ಚಿನ್ನದ ಪದಕಗಳು, 39 ಬೆಳ್ಳಿ ಪದಕಗಳು ಮತ್ತು 20 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ಈ ಮಹಾ ಸಾಧನೆಗಳನ್ನು ಹೊರತುಪಡಿಸಿ, ಅವರ ಶಕ್ತಿಶಾಲಿ ವೃತ್ತಿಜೀವನದುದ್ದಕ್ಕೂ ಅವರು 4 ಬಾರಿ ಅತ್ಯುತ್ತಮ ಪವರ್ ಲಿಫ್ಟರ್ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅತ್ಯುತ್ತಮ ಲಿಫ್ಟರ್. naadle.com ಜೊತೆಗಿನ ಸಂಭಾಷಣೆಯಲ್ಲಿ ಅಕ್ಷತಾ ಪೂಜಾರಿ ತನ್ನ ಪ್ರಯಾಣದ ಕುರಿತು ತಮ್ಮ ಸಿಹಿನುಡಿಗಳೊಂದಿಗೆ ಹಂಚಿಕೊಂಡರು.

ಬಾಲ್ಯದ ಕಥೆ ಮತ್ತು ಪವರ್ ಲಿಫ್ಟಿಂಗ್’ಗೆ ಪ್ರೇರಣೆ:
ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಬೆಲ್ಮನ್ನ ಲಿಟ್ಲ್ ಫ್ಲವರ್ ಶಾಲೆಯಲ್ಲಿ ಪೂರ್ಣಗೊಳಿಸಿದೆ. ನಂತರ, ನಾನು ಸರಕಾರಿ ಪ್ರೌಢಶಾಲೆಯಲ್ಲಿ ಸೇರಿಕೊಂಡು ನನ್ನ ಶಿಕ್ಷಣ ಪೂರ್ಣಗೊಳಿಸಿದೆ. ದುರಾದೃಷ್ಟವಶಾತ್, ಆರ್ಥಿಕ ಸಮಸ್ಯೆಗಳಿಂದಾಗಿ ನಾನು ನನ್ನ ಶಿಕ್ಷಣವನ್ನು 2 ವರ್ಷಗಳ ಕಾಲ ಮುಂದುವರಿಸಲು ಸಾಧ್ಯವಾಗಲಿಲ್ಲ. ನಂತರ ನಾನು ಜನ ಅಭಿಮಾನಿ ಪತ್ರಿಕೆಯಲ್ಲಿ ಕನ್ನಡದಲ್ಲಿ ಲೇಖನಗಳನ್ನು ಟೈಪ್ ಮಾಡುವ ಕೆಲಸಕ್ಕೆ ಸೇರಿಕೊಂಡೆ. ನಂತರ, ನಿಟ್ಟೆ ಕಾಲೇಜಿನಲ್ಲಿ ರಾಜ್ಯದ ಮಟ್ಟದ ಆಟಗಾರರಿಗೆ ಉಚಿತ ಸೀಟು ಕೊಡುತ್ತಾರೆ ಎಂದು ನನಗೆ ತಿಳಿದುಬಂತು. ನಾನು ರಾಜ್ಯಮಟ್ಟದ ಅಥ್ಲೆಟಿಕ್ ಆಗಿದ್ದ ಕಾರಣ, ನಿಟ್ಟೆ ಎಜುಕೇಶನ್ ಟ್ರಸ್ಟ್ ನವರು ನನಗೆ ಸಂದರ್ಶನದಲ್ಲಿ ಹಾಜರಾಗಲು ಮತ್ತು ಉಚಿತ ಸೀಟು ಪಡೆಯಲು ಸಾಕಷ್ಟು ಬೆಂಬಲ ಮತ್ತು ಸಹಾಕಾರ ನೀಡಿದ್ದರು. ಅಲ್ಲಿ ನನ್ನ ಡಿಗ್ರಿ ಮುಗಿಸಿ ನಂತರ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಮಾಸ್ಟರ್ ಡಿಗ್ರಿ ಪೂರ್ಣಗೊಳಿಸಿದೆ. 2007 ರಲ್ಲಿ ನಾನು ಪವರ್ ಲಿಫ್ಟಿಂಗ್ ಆರಂಭಿಸಿದ್ದೆ, ಅದಕ್ಕಿಂತ ಮುಂಚೆ ಓಟ ಹಾಗು ಹ್ಯಾಮರ್ ಎಸೆತ ಕ್ರೀಡೆಯಲ್ಲಿ ಸಕ್ರೀಯವಾಗಿದ್ದೆ.

ಪವರ್ ಲಿಫ್ಟಿಂಗ್ ನಲ್ಲಿ ನಿಮಗೆ ಆಸಕ್ತಿ ಹೇಗೆ ಹುಟ್ಟಿತು?
ಆಳ್ವಾಸ್ ನಲ್ಲಿ ಶಿಕ್ಷಣ ಪಡೆಯುವ ಸಮಯದಲ್ಲಿ ನಾನು ಹ್ಯಾಮರ್ ಎಸೆತದಲ್ಲಿ ರಾಜ್ಯ ಮಟ್ಟದ ಚಿನ್ನದ ಪದಕ ಪಡೆದಿದ್ದೆ. ಆ ಸಮಯದಲ್ಲಿ ನಮಗೆ ದಿನಾಲು ಜಿಮ್ ನಲ್ಲಿ ವ್ಯಾಯಮ ಮಾಡುವ ವಾಡಿಕೆಯಿತ್ತು. ಅಲ್ಲಿ ನಾನು 90ಕೆ.ಜಿ ತೂಕ ಎತ್ತುವುದನ್ನು ನಮ್ಮ ದೈಹಿಕ ಶಿಕ್ಷಕರು ಗಮನಿಸಿ, ನಿನಗೆ ಪವರ್ ಲಿಫ್ಟಿಂಗ್ ನಲ್ಲಿ ಆಸಕ್ತಿ ಇದೆಯೇ? ಎಂದು ಕೇಳಿದರು. ಅಲ್ಲಿಂದ ನನ್ನ ಪವರ್ ಲಿಫ್ಟಿಂಗ್ ಪಯಣ ಆರಂಭವಾಯಿತು. ಇಲ್ಲಿಯವರೆಗೆ ರಾಜ್ಯ ಮಟ್ಟದಲ್ಲಿ 310ಕೆ.ಜಿ ಹಾಗು ರಾಷ್ಟ್ರ ಮಟ್ಟದಲ್ಲಿ 77.5ಕೆ.ಜಿ ತೂಕ ಎತ್ತುವಿಕೆ ನನ್ನ ಅತ್ಯುನ್ನತ ದಾಖಲೆ.

ನಿಮಗೆ ಬೆಂಬಲವಾಗಿ ನಿಂತವರು ಯಾರು?
ಎಲ್ಲಾ ನನ್ನ ದೈಹಿಕ ಶಿಕ್ಷಕರು, ಈಶ್ವರ್ ಕಟೀಲ್, ಶ್ಯಾಮ್ ಸುಂದರ್ ಭಟ್, ವಿಜಯ್ ಕಾಂಚನ್ ಎಲ್ಲರೂ ನನಗೆ ಅತ್ಯುನ್ನತ ಬೆಂಬಲ ನೀಡಿ ಸಹಕರಿಸಿದ್ದಾರೆ. ಪವರ್ ಲಿಫ್ಟಿಂಗ್ ಅನ್ನು ಒಲಿಂಪಿಕ್ಸ್ ನಲ್ಲಿ ಸೇರಿಸಿದರೆ ನನ್ನನ್ನು ನಾನು ಅಲ್ಲಿ ನೋಡಲು ಬಯಸುತ್ತೇನೆ.

 

ನೀವು ಎಲ್ಲೆಲ್ಲಿ ಪವರ್ ಲಿಫ್ಟಿಂಗ್ ಅನ್ನು ಪ್ರತಿನಿಧಿಸಿದ್ದೀರಿ ?
2011ರಲ್ಲಿ ಲಂಡನ್ ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡೆಯಲ್ಲಿ 8 ಚಿನ್ನದ ಪದಕ ಪಡೆದಿದ್ದೆ, 2012 ಏಷ್ಯನ್ ಗೇಮ್ಸ್ ಪ್ರತಿನಿಧಿಸಿದ್ದೆ. 2014ರಲ್ಲಿ ಅಮೇರಿಕಾದಲ್ಲಿ ನಡೆದ ವಿಶ್ವ ಚ್ಯಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದೆ. ಇಲ್ಲಿಯವರೆಗೆ ೧೨೭ ಸನ್ಮಾನಗಳನ್ನು ಸ್ವೀಕರಿಸಿದ್ದೇನೆ. ಕರ್ನಾಟಕ ರಾಜ್ಯ ಸರಕಾರ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದ್ದು ನನಗೆ ಹೆಮ್ಮೆಯ ವಿಷಯ.

 

ನಿಮ್ಮ ಕನಸು.
ನನಗೆ ರೈಲ್ವೇ ಇಲಾಖೆಯಲ್ಲಿ ಕೆಲಸ ಸಿಗಬೇಕೆಂದು ಆಸೆ, ಅದರಂತೆ ಅದು ಪ್ರಗತಿಯಲ್ಲಿದೆ. ಅಲ್ಲಿ ಸೇರಿದ ನಂತರವೂ ಕ್ರೀಡೆಯಲ್ಲಿ ಪಾಳ್ಗೊಳ್ಳುತ್ತೇನೆ.

ನಿಮ್ಮ ಇಲ್ಲಿವರೆಗಿನ ಜೀವನ ಪ್ರಯಾಣದಲ್ಲಿ ಏನೇನು ಏರಿಳಿತ ಕಂಡಿದ್ದೀರ?
ನಾನು ಬಡ ಕುಟುಂಬದಲ್ಲಿ ಹುಟ್ಟಿದ ಕಾರಣ ಆರ್ಥಿಕ ಪರಿಸ್ಥಿತಿಯಲ್ಲಿ ನಾನು ಅನೇಕ ತೊಂದರೆಗಳನ್ನು ಎದುರಿಸಿದ್ದೆ. ಅಂತರಾಷ್ಟ್ರೀಯ ಪಂದ್ಯದಲ್ಲಿ ಭಾಗವಹಿಸುವ ಸಂದರ್ಭದಲ್ಲಿ ನನಗೆ 2,20,000 ರೂ. ಖರ್ಚು ಎದುರಾಗಿತ್ತು. ಅನೇಕ ಸಂಘ ಸಂಸ್ಥೆಗಳು ನನಗೆ ತುಂಬಾ ಸಹಾಯ ಒದಗಿಸಿತ್ತು. ಕಿನ್ನಿಗೋಳಿಯಲ್ಲಿನ ವೀರ ಮಾರುತಿ ಜಿಮ್ ಸೇರಿದ ನಂತರ ಈಶ್ವರ್ ಕಟೀಲ್ ರವರು ನನ್ನ ಎಲ್ಲಾ ಖರ್ಚುವೆಚ್ಚ ನೋಡಿಕೊಂಡರು. ಪೆಟ್ರೋಲ್ ವೆಚ್ಚ, ಪ್ರೋಟೀನ್ ಆಹಾರ, ಹಣ್ಣುಗಳು, ಪೌಶ್ಟಿಕ ಆಹಾರ ಎಲ್ಲವೂ ಅವರ ವತಿಯಿಂದ ನೀಡುತ್ತಿದ್ದರು. ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದರೂ ಅವರೇ ಪ್ರಾಯೋಜಿಸುತ್ತಾರೆ ಎಂಬ ಭರವಸೆ ನನಗಿದೆ.

ಯಾರಿಗಾದರೂ ಧನ್ಯವಾದ ತಿಳಿಸಬೇಕೆ?
ನನ್ನ ಎಲ್ಲಾ ದೈಹಿಕ ಶಿಕ್ಷಕರು, ನನಗೆ ಸಹಕರಿಸಿದ ಸಂಘ ಸಂಸ್ಥೆಗಳು ನನಗೆ ಬೆನ್ನೆಲುಬು ಆಗಿ ನಿಂತಿದ್ದಾರೆ. ಕೆಲವೊಂದು ಸನ್ಮಾನ ಸಮಾರಂಭಗಳಿಗೆ ಭಾಗವಹಿಸಲು ನನಗೆ ಸಾಧ್ಯವಾಗಲಿಲ್ಲ, ಆಯೋಜಕರಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ನನಗೆ ಅಹಂಕಾರವಿದೆಯೆಂದು ಯಾವತ್ತೂ ಯೋಚಿಸಬೇಡಿ, ಅಂತಹ ಸಂದರ್ಭದಲ್ಲಿ ನಾನು ಅಸಾಹಯಕಳಾಗಿದ್ದೆ.

ಯಾವತ್ತಾದರು ಈ ಕ್ಷೇತ್ರದಿಂದ ಹೊರಬರಬೇಕೆಂದು ಅನಿಸಿದೆಯೇ?
ಹೌದು, ಬೇರೆ ಕ್ರೀಡಾಪಟುಗಳು ನನ್ನ ದಾಖಲೆ ಮುರಿದಾಗ ಇದುವೇ ನನಗೆ ಕೊನೆ ಎಂದು ಯೋಚಿಸಿ ಅನೇಕ ಬಾರಿ ನಾನು ಬಿಟ್ಟುಬಿಡಲು ಬಯಸಿದ್ದೆ. ನಾನು ಭರವಸೆ ಕಳೆದುಕೊಂಡ ಸಂದರ್ಭಗಳಲ್ಲಿ ವಿಜಯ್ ಕಾಂಚನ್ ರವರು ನನಗೆ ಸ್ಪೂರ್ತಿ ತುಂಬಿಸುತ್ತಿದ್ದರು.

ನಿಮ್ಮ ಪ್ರತಿ ದಿನ ಹೇಗೆ ಸಾಗುತ್ತೆ?
ಮುಂಜಾನೆ 4 ಗಂಟೆಗೆ ಎದ್ದು ಹಾಲು ಕರೆದು ಡಿಪೋವರೆಗೆ ತಲುಪಿಸಿ 6 ಗಂಟೆ ಸುಮಾರಿಗೆ ದೈಹಿಕ ಅಭ್ಯಾಸ ಮಾಡಲು ಜಿಮ್ ಗೆ ತೆರಳುತ್ತೇನೆ. ನಾನು ಕೃಷಿ ಹಿನ್ನಲೆಯ ಕುಟುಂಬದಲ್ಲಿರುವುದರಿಂದ 11 ಗಂಟೆಗೆ ಮನೆಗೆ ಮರಳಿ ಕೃಷಿ ಕೆಲಸದಲ್ಲಿ ತೊಡಗುತ್ತೇನೆ. ಪ್ರಾರಂಭದಲ್ಲಿ ಸಂಜೆ ಹೊತ್ತು ಕೂಡಾ ದೈಹಿಕ ಅಭ್ಯಾಸ ಮಾಡಲು ಜಿಮ್ ಗೆ ಹೋಗುತ್ತಿದ್ದೆ, ಆದರೆ ಕೆಲಸದ ಒತ್ತಡದಿಂದ ದಿನಕ್ಕೆ ಒಂದು ಬಾರಿ ಮಾತ್ರ ಅಭ್ಯಾಸ ನಡೆಸುತ್ತಿದ್ದೇನೆ.

ಜನರಿಗೆ ನಿಮ್ಮ ಸಂದೇಶ.
ಇಲ್ಲಿಯವರೆಗೆ ನನಗೆ ಸಹಕರಿಸಿದ ಎಲ್ಲಾ ಬಂಧು ಬಾಂಧವರಿಗೂ ನನ್ನ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿಯೂ ಇದೇ ತರಹದ ಸಹಕಾರವನ್ನು ಅಪೇಕ್ಷಿಸುತ್ತೇನೆ.

ಮಂಗಳೂರು ಮೇಯರ್ ಕವಿತಾ ಸನಿಲ್ ಅವರಲ್ಲಿ ನಾಡ್ಲೆ ತಂಡ ಅಕ್ಷತಾ ಪೂಜಾರಿಯವರ ಸಾಧನೆಯ ಬಗ್ಗೆ ತಿಳಿಸಿದಾಗ ಕವಿತಾರವರು ಅಕ್ಷತಾರವರಿಗೆ ಅಭಿನಂದನೆ ತಿಳಿಸಿದರು. “ಗ್ರಾಮೀಣ ಪ್ರದೇಶದ ಎಲ್ಲಾ ಪ್ರತೀಭಾವಂತ ಹೆಣ್ಣುಮಕ್ಕಳು ಹೀಗೆಯೇ ತಮ್ಮ ಪ್ರತಿಭೆಯನ್ನು ವ್ಯಕ್ತಪಡಿಸಿದ್ದಲ್ಲಿ ನಗರದ ಹುಡುಗಿಯರಿಗೂ ಇದು ಸ್ಫೂರ್ತಿಯಾಗುತ್ತದೆ. ನನ್ನ ಕಡೆಯಿಂದ ಸಾಧ್ಯವಾದಷ್ಟು ಸಹಾಯ ಮಾಡಲು ನಾನು ತಯಾರಿದ್ದೇನೆ” ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ಇಂತಹ ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸುವ ಕಾರ್ಯದಲ್ಲಿ ತೊಡಗಿರುವ ನಾಡ್ಲೆ.ಕಾಮ್ ಗೆ ಕವಿತಾ ಸನಿಲ್ ರವರು ಅಭಿನಂದಿಸಿದರು. ಅಡಗಿರುವ ಪ್ರತೀಭಾವಂತ ಜನರ ಪ್ರತಿಭೆಯನ್ನು ಸಮಾಜದ ಮುಂದೆ ಇಡುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ನಾಡ್ಲೆ ತಂಡದ ವತಿಯಿಂದ ನಿಮ್ಮ ಉಜ್ವಲ ಭವಿಷ್ಯಕ್ಕೆ ಶುಭ ಹಾರೈಕೆಗಳು. ಇನ್ನೂ ಎತ್ತರಕ್ಕೆ ನಿಮ್ಮ ವಿಜಯದ ಕೀರ್ತಿ ಪತಾಕೆ ಹಾರಲಿ ಎಂದು ನಾವು ನಿರೀಕ್ಷಿಸುತ್ತೇವೆ. ನಿಮ್ಮೊಂದಿಗಿನ ಸಂಭಾಷಣೆಯ ಸಂದರ್ಭದಲ್ಲಿ ನಿಮ್ಮ ಸರಳತೆಯ ಮನೋಭಾವ ನಮಗೆ ಮೆಚ್ಚುಗೆಯಾಗಿದೆ.

For English write up click on the link: http://blog.naadle.com/you-will-feel-proud-after-knowing-mangalores-powerlifting-champion-won-medals-globally/

naadleIf you like this article, click on the button below