Oops! It appears that you have disabled your Javascript. In order for you to see this page as it is meant to appear, we ask that you please re-enable your Javascript!

ಭಾರತ ಸರಕಾರದ ಮಹೋನ್ನತ ಗೌರವ ಭಾರತ ರತ್ನ..!!

bharatha sarkarada mahonnata gowrava bharatha ratna..!!-naadle
Share This:

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಭಾರತ ಸರ್ಕಾರ ನೀಡುವ ಪರಮೋಚ್ಛ ಗೌರವವೇ ಭಾರತ ರತ್ನ. ಇದನ್ನು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಎಂದೂ ಪರಿಗಣಿಸಲಾಗಿದೆ. ಆಯ್ಕೆಯಾದವರಿಗೆ ಅಶ್ವತ್ಥ ಎಲೆಯ ಆಕಾರದಲ್ಲಿರುವ ಪದಕವನ್ನು ನೀಡಿ ಗೌರವಿಸಲಾಗುತ್ತದೆ.

ಆರಂಭದಲ್ಲಿ ಕಲೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರು ಅಥವಾ ಸಾಧನೆ ಮಾಡಿದವರನ್ನು ಭಾರತ ರತ್ನಕ್ಕೆ ಪರಿಗಣಿಸಲಾಗುತ್ತಿತ್ತು. ಆದರೆ, 2011ರ ಡಿಸೆಂಬರ್ ನಲ್ಲಿ ತಿದ್ದುಪಡಿ ಮಾಡಿ ಯಾವುದೇ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದವರನ್ನು ಅರ್ಹರು ಎಂದು ಪರಿಗಣಿಸಲು ತೀರ್ಮಾನಿಸಲಾಯಿತು. ಭಾರತ ರತ್ನ ನೀಡಲು ಜನಾಂಗ, ಲಿಂಗ, ವೃತ್ತಿ ಇತ್ಯಾದಿಗಳೆಲ್ಲವನ್ನೂ ಮೀರಿ ಸಾಧನೆಯನ್ನು ಮಾತ್ರ ಮಾನದಂಡವಾಗಿ ಪರಿಗಣಿಸಲಾಗುತ್ತಿದೆ.

ಭಾರತ ರತ್ನದ ಜತೆ ನಗದು ಪುರಸ್ಕಾರ ಇರುವುದಿಲ್ಲ. ಆದರೆ, ಗೌರವಕ್ಕೆ ಪಾತ್ರರಾದವರು ಸರ್ಕಾರದ ಕೆಲವು ಸೌಲಭ್ಯಗಳನ್ನು ಪಡೆಯಬಹುದಾಗಿದೆ. ರೈಲುಗಳಲ್ಲಿ ಉಚಿತ ಪ್ರಯಾಣ, ಸರ್ಕಾರಿ ಕಾರ್ಯಕ್ರಮಗಳಲ್ಲಿ ಆದ್ಯತೆ ಸೇರಿದಂತೆ ಕೆಲವು ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ. ಅಲ್ಲದೆ, ಭಾರತ ರತ್ನಕ್ಕೆ ಪಾತ್ರರಾದವರು ಭಾರತ ಸರ್ಕಾರದ ಗಣ್ಯರ ಪಟ್ಟಿ ಅಥವಾ ಪ್ರೊಟೊಕಾಲ್ ನಲ್ಲಿ ಏಳನೇ ಸ್ಥಾನ ಪಡೆಯುತ್ತಾರೆ. ಅಂದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನ ಮಂತ್ರಿ, ರಾಜ್ಯಪಾಲ, ಮಾಜಿ ರಾಷ್ಟ್ರಪತಿ, ಉಪಪ್ರಧಾನ ಮಂತ್ರಿ, ಮುಖ್ಯ ನ್ಯಾಯಾಧೀಶ, ಲೋಕಸಭಾ ಸ್ಪೀಕರ್, ಕ್ಯಾಬಿನೆಟ್ ಮಂತ್ರಿ, ಮುಖ್ಯಮಂತ್ರಿ, ಮಾಜಿ ಪ್ರಧಾನ ಮಂತ್ರಿ ಮತ್ತು ಸಂಸತ್ತಿನ ಎರಡೂ ಸದನದ ವಿರೋಧ ಪಕ್ಷದ ನಾಯಕರ ನಂತರದ ಸ್ಥಾನ ಪಡೆಯುತ್ತಾರೆ.
ಅಶ್ವತ್ಥ ಎಲೆಯ ಆಕಾರದಲ್ಲಿ ಪದಕವಿರುತ್ತದೆ. ಇದರ ಒಂದು ಬದಿಯಲ್ಲಿ ರಾಷ್ಟ್ರಲಾಂಛನವಿದ್ದು ‘ಸತ್ಯಮೇವ ಜಯತೇ’ ಎಂದು ಬರೆದಿರುತ್ತದೆ. ಮತ್ತೊಂದು ಬದಿಯಲ್ಲಿ ಸೂರ್ಯನ ಚಿತ್ರ ಮತ್ತು ಅದರ ಕೆಳಗೆ ದೇವನಾಗರಿ ಲಿಪಿಯಲ್ಲಿ ‘ಭಾರತ ರತ್ನ’ ಎಂದು ಬರೆಯಲಾಗಿದೆ.
1954ರಲ್ಲಿ ಭಾರತ ರತ್ನ ನೀಡಲು ಆರಂಭವಾಯಿತು. ಸ್ವಾತಂತ್ರ್ಯ ಹೋರಾಟಗಾರ ಸಿ. ರಾಜಗೋಪಾಲಾಚಾರಿ, ಶಿಕ್ಷಣ ತಜ್ಞ ಮತ್ತು ದೇಶದ ಮೊದಲ ಉಪರಾಷ್ಟ್ರಪತಿಗಳಾದ ಸರ್ವಪಲ್ಲಿ ರಾಧಾಕೃಷ್ಣನ್, ಭೌತವಿಜ್ಞಾನಿ ಸಿ.ವಿ. ರಾಮನ್ ಮೊದಲ ಬಾರಿ ಈ ಗೌರವಕ್ಕೆ ಪಾತ್ರರಾದರು. ಭಾರತ ರತ್ನ ನೀಡಲು ಆರಂಭಿಸಿದಾಗ ಮರಣೋತ್ತರವಾಗಿ ನೀಡಲು ಅವಕಾಶ ಇರಲಿಲ್ಲ. ಆದರೆ, 1955ರಲ್ಲಿ ನಿಯಮಗಳಿಗೆ ತಿದ್ದುಪಡಿ ತಂದು ಮರಣೋತ್ತರವಾಗಿ ನೀಡಲು ಅವಕಾಶ ಕಲ್ಪಿಸಲಾಯಿತು. ಮರಣೋತ್ತರವಾಗಿ ಮೊದಲು ಈ ಗೌರವಕ್ಕೆ ಪಾತ್ರರಾದವರು ಮಾಜಿ ಪ್ರಧಾನಿ ದಿ. ಲಾಲ್ ಬಹದ್ದೂರ್ ಶಾಸ್ತ್ರಿ. 1966ರಲ್ಲಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಯಿತು.

ಸಾಮಾನ್ಯವಾಗಿ ಭಾರತೀಯ ಸಾಧಕರಿಗೆ ಭಾರತ ರತ್ನ ನೀಡಲಾಗುತ್ತಿದೆ. 1980ರಲ್ಲಿ ಮದರ್ ತೆರೆಸಾ ಅವರನ್ನು ಭಾರತೀಯರು ಎಂದು ಪರಿಗಣಿಸಿ ಭಾರತ ರತ್ನ ನೀಡಿದ ಬಳಿಕ ಇಬ್ಬರು ವಿದೇಶಿಯರಿಗೆ ಈ ಗೌರವ ಸಂದಿದೆ. ಅವಿಭಜಿತ ಪಾಕಿಸ್ತಾನದ ಸ್ವಾತಂತ್ರ್ಯ ಹೋರಾಟಗಾರ ಅಬ್ದುಲ್ ಗಫರ್ ಖಾನ್ ಅವರಿಗೆ1987ರಲ್ಲಿ ಮತ್ತು ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರಿಗೆ 1990ರಲ್ಲಿ ಭಾರತ ರತ್ನ ನೀಡಿ ಗೌರವಿಸಲಾಗಿತ್ತು.

ಹೌದು ಒಂದು ಬಾರಿ ಭಾರತ ರತ್ನ ಘೋಷಣೆಯಾಗಿ ನಂತರ ರದ್ದು ಮಾಡಬೇಕಾದ ಸಂದರ್ಭ ಒದಗಿಬಂದಿತ್ತು. ಅದು ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರಬೋಸ್ ಅವರಿಗೆ. 1992ರಲ್ಲಿ ಸುಭಾಷ್ ಚಂದ್ರಬೋಸ್ ಗೆ ಮರಣೊತ್ತರವಾಗಿ ಭಾರತ ರತ್ನ ಗೌರವ ನೀಡುವುದಾಗಿ ಸರ್ಕಾರ ಘೋಷಿಸಿತ್ತು. ಆದರೆ, ಅದರ ವಿರುದ್ಧ ಸುಪ್ರೀಂ ಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಕೆಯಾಗಿತ್ತು. ನೇತಾಜಿಯವರು ಬದುಕಿದ್ದಾರೆಯೇ ಅಥವಾ ಮೃತಪಟ್ಟಿದ್ದಾರೆಯೇ ಎಂಬ ಬಗ್ಗೆ ಅನುಮಾನಗಳಿವೆ. ಇಂತಹ ಸಂದರ್ಭದಲ್ಲಿ ಅವರಿಗೆ ಭಾರತ ರತ್ನ ನೀಡುವ ನಿರ್ಧಾರ ಸರಿಯೇ ಎಂದು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು. ಕೊನೆಗೆ 1997ರಲ್ಲಿನ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಬೋಸ್ ಅವರಿಗೆ ಭಾರತ ರತ್ನ ನೀಡುವ ನಿರ್ಧಾರವನ್ನು ರದ್ದುಗೊಳಿಸಲಾಗಿತ್ತು. ಒಮ್ಮೆ ಒಬ್ಬ ವ್ಯಕ್ತಿಗೆ ಭಾರತ ರತ್ನ ಘೋಷಿಸಿ ನಂತರ ರದ್ದು ಮಾಡಿದ್ದು ಇದೇ ಮೊದಲು ಹಾಗೂ ಕೊನೆಯಾಗಿದೆ.
ಭಾರತ ರತ್ನ ನೀಡುವ ವಿಚಾರವೂ ಹಲವು ಬಾರಿ ವಿವಾದಕ್ಕೀಡಾಗಿದೆ. ಸುಭಾಷ್ ಚಂದ್ರ ಬೋಸ್ ಪ್ರಕರಣದ ನಂತರ, 2013ರಲ್ಲಿ ವಿಜ್ಞಾನಿ ಸಿ.ಎನ್.ಆರ್. ರಾವ್ ಮತ್ತು ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ ಭಾರತ ರತ್ನ ಘೋಷಣೆಯಾದಾಗ ಆಕ್ಷೇಪ ವ್ಯಕ್ತವಾಗಿತ್ತು. ಸರ್ಕಾರದ ನಿರ್ಧಾರ ಪ್ರಶ್ನಿಸಿ ಹಲವಾರು ಮಂದಿ ಕೆಲವು ರಾಜ್ಯಗಳ ಹೈಕೋರ್ಟ್ ಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಹೋಮಿ ಭಾಭಾ, ವಿಕ್ರಮ್ ಸರಾಭಾಯಿಯಂತಹ ವಿಜ್ಞಾನಿಗಳು ಸಿ.ಎನ್.ಆರ್. ರಾವ್ ಅವರಿಗಿಂತಲೂ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಅರ್ಜಿಗಳಲ್ಲಿ ಪ್ರತಿಪಾದಿಸಲಾಗಿತ್ತು. ಸಚಿನ್ ತೆಂಡೂಲ್ಕರ್ ಅವರು ರಾಜ್ಯಸಭಾ ಸದಸ್ಯರಾಗಿರುವುದರಿಂದ ಅವರನ್ನು ಆಯ್ಕೆ ಮಾಡಿದ್ದು, ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ ಹಾಗೂ ಮಿಜೋರಾಂ ರಾಜ್ಯಗಳಲ್ಲಿ ಚಚುನಾವಣಾ ಪ್ರಕ್ರಿಯೆ ಪ್ರಗತಿಯಲ್ಲಿರುವಾಗ ಈ ಕ್ರಮ ಕೈಗೊಳ್ಳಲಾಗಿದೆ. ಹೀಗಾಗಿ ಇದು ನೀತಿ ಸಂಹಿತೆಯ ಉಲ್ಲಂಘನೆ ಎಂದು ಚುನಾವಣಾ ಆಯೋಗಕ್ಕೂ ದೂರು ನೀಡಲಾಗಿತ್ತು. ಆದರೆ ಕೊನೆಯಲ್ಲಿ, ಎಲ್ಲ ಅರ್ಜಿಗಳನ್ನು ರದ್ದುಪಡಿಸಿದ್ದ ಹೈಕೋರ್ಟ್ ಗಳು ಮತ್ತು ಚುನಾವಣಾ ಆಯೋಗ ರಾವ್ ಮತ್ತು ಸಚಿನ್ ಕೊಡುಗೆಯನ್ನು ಕೊಂಡಾಡಿದ್ದವು.

Source :  https://www.prajavani.net

 

Offers

Want to Add your Offers, contact Naadle at 7090787344 or Email us at info@naadle.com